ಡೈಲಿ ವಾರ್ತೆ:27 ಮಾರ್ಚ್ 2023

ಇಂದು ರೆಬೆಲ್‌ಸ್ಟಾರ್‌ ಅಂಬರೀಶ್‌ ಸ್ಮಾರಕ ಲೋಕಾರ್ಪಣೆ

ಬೆಂಗಳೂರು: ರೆಬೆಲ್‌ಸ್ಟಾರ್‌ ಅಂಬರೀಶ್‌ ಅವರ ಸ್ಮಾರಕ ಸೋಮವಾರ ಲೋಕಾರ್ಪಣೆಯಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ಈ ಸ್ಮಾರಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ 1 ಎಕರೆ 34 ಗುಂಟೆ ಜಾಗದಲ್ಲಿ ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. ವಿಭಿನ್ನ ಶೈಲಿಯಲ್ಲಿ ನಿರ್ಮಿಸಲಾದ ಈ ಸ್ಮಾರಕದಲ್ಲಿ ಕೈ ಮುಗಿಯುವ ಆಕಾರದಲ್ಲಿ ನಿರ್ಮಾಣ ಮಾಡಲಾಗಿರುವ ಗೋಪುರ ಸ್ಮಾರಕದ ಆಕರ್ಷಣೆಯಾಗಿದೆ.
ಜತೆಗೆ 32 ಅಡಿ ಎತ್ತರದ ಅಂಬರೀಶ್‌ ಅವರ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದಲ್ಲದೇ, ಮ್ಯೂಸಿಯಂ ಕೂಡಾ ಸಿದ್ಧವಾಗುತ್ತಿದೆ. ರಾತ್ರಿ ಹೊತ್ತಲ್ಲಿ ಸ್ಮಾರಕ ಕಂಗೊಳಿಸುವಂತೆ 100ಕ್ಕೂ ಹೆಚ್ಚು ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಲಾಗಿದೆ.

ಈ ಮೂಲಕ ಅಂಬರೀಶ್‌ ಅವರ ನೆನಪನ್ನು ಚಿರಸ್ಥಾಯಿಯಾಗಲಿದೆ. ಇದಲ್ಲದೇ ನಗರದ ರೇಸ್‌ಕೋರ್ಸ್‌ ರಸ್ತೆಗೆ ರೆಬೆಲ್‌ಸ್ಟಾರ್‌ ಎಂ ಎಚ್‌. ಅಂಬರೀಶ್‌ ರಸ್ತೆ ಎಂದು ಸಿಎಂ ಬೊಮ್ಮಾಯಿ ನಾಮಕರಣ ಮಾಡಿ ಅನಾವರಣ ಕೂಡ ಮಾಡಲಿದ್ದಾರೆ.