ಡೈಲಿ ವಾರ್ತೆ:27 ಮಾರ್ಚ್ 2023

ಚಲಿಸುತ್ತಿದ್ದ ಖಾಸಗಿ ಶಾಲಾ ಬಸ್‌ಗೆ ಆಕಸ್ಮಿಕ ಬೆಂಕಿ:ಬಸ್ಸಲ್ಲಿದ್ದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅದೃಷ್ಟವಶಾತ್‌ ಪಾರು.!

ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ಚಲಿಸುತ್ತಿದ್ದ ಖಾಸಗಿ ಶಾಲಾ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಅದರಲ್ಲಿದ್ದ 50ಕ್ಕೂ ಹೆಚ್ಚು ಮಕ್ಕಳು ಅದೃಷ್ಟವಶಾತ್‌ ಪಾರಾದ ಘಟನೆ ನಡೆದಿದೆ.

ಸಿರಗುಪ್ಪದಿಂದ ತೆಕ್ಕಲಕೋಟೆಗೆ ತೆರಳುತ್ತಿದ್ದ ವಿಶ್ವಜ್ಯೋತಿ ಇಂಟರ್ ನ್ಯಾಷನಲ್ ಸ್ಕೂಲ್ ಗೆ ಸೇರಿದ ಬಸ್ ಬೆಂಕಿ ಹತ್ತಿ ಉರಿದಿದೆ.
ಮೊದಲಿಗೆ ಡಿಸೇಲ್ ಇಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಇದನ್ನು ಗಮನಿಸಿ, ಡ್ರೈವರ್‌ಗೆ ತಿಳಿಸಿದ್ದಾರೆ. ತಕ್ಷಣ ಬಸ್ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ ಚಾಲಕ ಎಲ್ಲ ಮಕ್ಕಳನ್ನು ಬಸ್‌ನಿಂದ ಕೆಳಗಿಳಿಸಿದ್ದಾರೆ.

ಮಕ್ಕಳು ಕೆಳಗೆ ಇಳಿಯುತ್ತಿದ್ದಂತೆ ಬಸ್‌ ಹೊತ್ತಿ ಉರಿದಿದೆ. ವಿದ್ಯಾರ್ಥಿಗಳು, ಚಾಲಕ ಹಾಗೂ ಬಸ್‌ನಲ್ಲಿದ್ದ ಮಹಿಳಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತ ಸ್ವಲ್ಪದರಲ್ಲೇ ತಪ್ಪಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸಿದ್ದಾರೆ. ಸಿರಗುಪ್ಪ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.