ಡೈಲಿ ವಾರ್ತೆ:27 ಮಾರ್ಚ್ 2023
ವರದಿ: ಕೆ . ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ.
” ಸಮೃದ್ಧ ಬರವಣಿಗೆ ಮತ್ತು ಓದು ಇಂದಿನ ಯುವ ಪೀಳಿಗೆಗೆ ಕಲಿಸುವಂತಹಾಗಬೇಕು:’ಕಸೂತಿಯಾಗದ ದಾರದುಂಡೆ’ ಹಾಗೂ ಅಂಕಣ ಬರಹಗಳ ‘ಬೆಳ್ಳಿ ಚುಕ್ಕಿ’ ಕೃತಿಗಳ ಲೋಕಾರ್ಪಣೆ ಸಮಾರಂಭ….!”
ಬರವಣಿಗೆ ಮತ್ತು ನಿರೂಪಣೆಯ ಮೂಲಕ ತನ್ನ ಹೆಸರನ್ನು ಪ್ರತಿಷ್ಠಾಪಿಸಿಕೊಂಡಿರುವ ರೇವತಿ ಶೆಟ್ಟಿ ಕೋಟ ಅವರ ಎರಡು ಚೊಚ್ಚಲ ಕೃತಿ ಬೆಂಗಳೂರಿನ ಬಂಟರ ಸಂಘದ ಆವರಣದಲ್ಲಿ ಅನಾವರಣಗೊಂಡಿದೆ.
ಪ್ರಾಂಜಲ ಪಬ್ಲಿಕೇಷನ್ಸ್ ಅವರ ಸಹಭಾಗಿತ್ವದಲ್ಲಿ ಲೇಖಕಿ ರೇವತಿ ಶೆಟ್ಟಿ ಕೋಟ ಅವರ ಕಥಾಸಂಕಲನ ‘ಕಸೂತಿಯಾಗದ ದಾರದುಂಡೆ’ ಹಾಗೂ ಅಂಕಣ ಬರಹಗಳ ‘ಬೆಳ್ಳಿ ಚುಕ್ಕಿ’ ಕೃತಿಗಳ ಲೋಕಾರ್ಪಣೆ ಸಮಾರಂಭವು ಶನಿವಾರದಂದು ಬೆಂಗಳೂರಿನಲ್ಲಿ ನಡೆಯಿತು.ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ನಿವೃತ್ತ ಡೀನ್ ಬಿ.ಎಸ್. ರಾಘವೇಂದ್ರ, “ಓದುಗರನ್ನು ವಿಭಿನ್ನ ಲೋಕಕ್ಕೆ ಓದಿಸಿಕೊಂಡು ಹೋಗುವಂತಹ ಕೃತಿ ಇದಾಗಿದ್ದು, ನೋವು ನಲಿವುಗಳ ಹೂರಣವಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ಪುಸ್ತಕಗಳ ಕೊಡುಗೆ ಬಹಳಷ್ಟಿದೆ. ಆದರೆ, ಪುಸ್ತಕದ ಓದುವಿಕೆಯೇ ನಿಂತುಹೋಗಿದೆ. ಬರವಣಿಗೆ ಒಂದು ಒಳ್ಳೆಯ ಹವ್ಯಾಸವಾಗಿದ್ದು, ಅದನ್ನು ಇಂದಿನ ಬೆಳೆಯುತ್ತಿರುವ ಮಕ್ಕಳಿಗೆ ಕಲಿಸಬೇಕಾಗಿದೆ” ಎಂದರು.
ಲೇಖಕಿ, ಕುಸುಮ ಆಯರಹಳ್ಳಿ, “ನಮ್ಮ ಸಮಾಜ ನಮ್ಮ ಮೇಲೆ ಹೇರಿರುವ ಚೌಕಟ್ಟುಗಳ ಆಚೆಗೆ, ನಮ್ಮೊಳಗೆ ಒಂದು ಹಂತದ ಬದುಕಿನ ಕುರಿತ ಆಲೋಚನಗೆಳು ಮೂಡುತ್ತದೆ. ನಮ್ಮ ಬದುಕು ಹೀಗೆ ಇರಬೇಕಿತ್ತು ಅನ್ನಿಸುವ ನಮ್ಮೊಳಗಿನ ಆಶಯಕ್ಕೆ ಈ ಕೃತಿಯು ಉತ್ತರವಾಗಿದೆ. ಕತೆಗಾರ್ತಿ ನೈಜ ಸಂಬಂಧಗಳನ್ನು ಕಾಪಾಡಿಕೊಂಡು ಬಂದಿರುವ ಕಾರಣದಿಂದಲೇ ಇಂತಹ ಅದ್ಭುತವಾದ ಕಥಾಸಂಕಲನ ಹೊರಬರಲು ಸಾಧ್ಯವಾಯಿತು. ರೇವತಿ ಅವರ ಕತೆಗಳಲ್ಲಿ ವಿನಯವಂತಿಕೆ ಅಡಗಿದೆ” ಎಂದು ತಿಳಿಸಿದರು.
ಲೇಖಕ ವಿಕಾಸ್ ನೇಗಿಲೋಣಿ ತಮ್ಮ ಶುಭನುಡಿಯಲ್ಲಿ ಮಾತನಾಡುತ್ತಾ ಇವತ್ತಿನ ಕಾಲಘಟ್ಟದಲ್ಲಿ ಒಬ್ಬ ಸಾಹಿತಿಯಾದವ ತನ್ನ ಕಾಲಘಟ್ಟದ ರಾಜಕೀಯ ವಿಚಾರಗಳಿಗೆ ಪ್ರತಿಕ್ರಿಯಿಸುವುದು ಅನಿವಾರ್ಯ ಅನ್ನುವಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಬರವಣಿಗೆ ನಮ್ಮ ಭಾವನೆಗಳನ್ನು ನಮ್ಮ ವಿಚಾರವನ್ನು ಅಭಿವ್ಯಕ್ತಗೊಳಿಸಬಲ್ಲ ಒಂದು ಮಾಧ್ಯಮ. ಎಲ್ಲ ರೀತಿಯ ಭಾವನೆಗಳಿಗೂ ಬರವಣಿಗೆಯೇ ಮೂಲವಾಗಿದೆ. ಇನ್ನು ಕೃತಿಯೊಂದು ನಿಮ್ಮ ಸ್ಥಳೀಯ ಕತೆಯನ್ನು ಹೇಳುತ್ತಲೇ, ರಾಷ್ಟ್ರಮಟ್ಟಕ್ಕೂ ತಲುಪುವ ಸಾಧ್ಯತೆ ಇದೆ. ಪ್ರಸ್ತುತ ದಿನಗಳಲ್ಲಿ ಓದುವವರು ಕಡಿಮೆಯಾಗಿದ್ದು, ಕತೆಗಾರರು ಜಾಸ್ತಿಯಾಗಿದ್ದಾರೆ. ಆದರೆ ನಾವು ಗಮನಿಸಬೇಕಾಗಿದ್ದು, ಕತೆಗಾರರು ಜಾಸ್ತಿಯಿಲ್ಲ. ಕೇಳುಗರು ಕಮ್ಮಿಯಾಗಿದ್ದಾರೆ ಎಂಬುವುದನ್ನು, ಎಂದು ಅಭಿವ್ಯಕ್ತಪಡಿಸಿದರು.
ಬೆಂಗಳೂರಿನ ಬಂಟರ ಸಂಘ ಅಧ್ಯಕ್ಷ ಮುರಳೀಧರ ಹೆಗಡೆ ತಮ್ಮ ಮಾತಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾ, “ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಲೇಖಕಿ ರೇವತಿ ಶೆಟ್ಟಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳಲ್ಲಿ ಕಿರು ಕಾಣಿಕೆಗಳನ್ನು ಕೊಡುವಾಗ ಪುಸ್ತಕ ನೀಡುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಆಗ ಪುಸ್ತಕ ಓದುವ ಹವ್ಯಾಸವು ಬೆಳೆಯುತ್ತದೆ,” ಎಂದರು.
ಲೇಖಕಿ ರೇವತಿ ಶೆಟ್ಟಿ, “ಕಸೂತಿಯಾಗದ ದಾರಗಳು ಕಥಾಸಂಕಲನದ ಮೂಲಕ ಕತೆ ಎನ್ನುವಂತಹ ಪರಿಕಲ್ಪನೆಯನ್ನು ಓದುಗರಿಗೆ ಒದಗಿಸಿದ್ದೇನೆ ಅಷ್ಟೇ. ಇಲ್ಲಿನ ಪ್ರತಿಯೊಂದು ಕತೆಗಳನ್ನು ನಾನು ಸತ್ಯದ ಪರದೆಯ ಮೇಲೆ ಬರೆದಿದ್ದೇನೆ. ಇಲ್ಲಿನ ಘಟನೆಗಳು ನಾನು ಹಲವರ ಜೀವನದಲ್ಲಿ ನೋಡಿರುವ ಸತ್ಯಸಂಗತಿಗಳಾಗಿವೆ. ಅದಕ್ಕೆ ಬಣ್ಣವನ್ನು ಹಚ್ಚಿ ಬರವಣಿಗೆಯ ರೂಪ ನೀಡಿದ್ದೇನೆ” ಎಂದು ತಿಳಿಸಿದರು.
ನಿವೃತ್ತ ವಿಜ್ಞಾನಿ, ಬೆಂಗಳೂರಿನ ವಾಗ್ದೇವಿ ವಿಲಾಸ ಸಮೂಹ ಸಂಸ್ಥೆಗಳ ಸಂಸ್ಥಾಪಕ ಕೆ. ಹರೀಶ್, “ನಾವು ಓದುಗರಾದಾಗ ಎಷ್ಟು ಜನರ ಜೀವನದ ಅನುಭಗಳು ನಮಗೆ ಆಯಾಚಿತವಾಗಿ ಸಿಗುತ್ತದೆ. ಜೀವನದಲ್ಲಿ ಯಶಸ್ಸು ಅನ್ನುವಂತಹದ್ದು ಜೀವನವನ್ನು ಪರಿಪೂರ್ಣವಾಗಿ ಅನುಭವಿಸುವಂತಹದ್ದು. ನಮ್ಮಲ್ಲಿರುವ ದೌರ್ಬಲ್ಯವನ್ನು ಮೀರಿ, ಜೀವನದಲ್ಲಿ ಗರಿಷ್ಟ ಮೌಲ್ಯವನ್ನು ಪಡೆಯಲು ಸಾಧ್ಯವಾಗುವುದೇ ನಮ್ಮ ಯಶಸ್ಸಿನ ಮೂಲಕ. ರೇವತಿ ಅವರ ಬರವಣಿಗೆಯಲ್ಲಿ ಇಂತಹ ಹಲವಾರು ಸರಳ ನಿರೂಪಣೆಯ ಮೌಲ್ಯಯುತವಾದ ಕತೆ, ಲೇಖನಗಳನ್ನು ಕಾಣಬಹುದಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಬಂಟರ ಸಂಘದ ಕೆಲವು ಪದಾಧಿಕಾರಿಗಳು ಉಪಸ್ಥಿತರಿದ್ದರು ಮತ್ತು ಸಾಹಿತ್ಯ ಅಭಿಮಾನಿಗಳು ತುಂಬಾ ಸಂಖ್ಯೆಯಲ್ಲಿ ನಡೆದು ಕಾರ್ಯಕ್ರಮವನ್ನು ಚಂದಗಾಣಿಸಿ ಕೊಟ್ಟರು.