ಡೈಲಿ ವಾರ್ತೆ:02 ಏಪ್ರಿಲ್ 2023

ಗೋರಕ್ಷಣೆ ನೆಪದಲ್ಲಿ ಸಾತನೂರು ಇದ್ರೀಶ್ ಪಾಷ ಕೊಲೆ ಪ್ರಕರಣ; ಈ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಪ್ರತಿಕ್ರಿಯೆ!

ಕನಕಪುರ;ಗೋರಕ್ಷಣೆಯ ಹೆಸರಲ್ಲಿ ನಡೆದ ಹತ್ಯೆ ಕೇವಲ ಹುಚ್ಚಾಟ ಆಗಿರಲಾರದು. ಇದು ಚುನಾವಣಾ ದಿನಗಳಲ್ಲಿ ಕೋಮುದ್ವೇಷವನ್ನು ಬಡಿದೆಬ್ಬಿಸುವ ಯೋಜಿತ ಸಂಚಿನ‌ ಭಾಗವಾಗಿರುವ ಸಾಧ್ಯತೆ ಇದೆ.‌ ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಕೂಲಂಕುಷ ತನಿಖೆ ನಡೆಸಬೇಕು ಎಂದು ಸಾತನೂರು ಇದ್ರೀಶ್ ಕೊಲೆಗೆ ಸಂಬಂಧಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕರ್ನಾಟಕ ಇಂತಹ ಅಸಮರ್ಥ‌, ಅದಕ್ಷ ಮತ್ತು ಬೇಜವಾಬ್ದಾರಿ ಗೃಹ‌ಸಚಿವರನ್ನು ಎಂದೂ‌ ನೋಡಿರಲಿಲ್ಲ. ತನ್ನ‌ ಇಲಾಖೆಯ ಮೇಲೆ ನಿಯಂತ್ರಣ‌ ಇಲ್ಲದ ಈ ಸಚಿವರಿಗೆ ರಾಜ್ಯದ ಶಾಂತಿ‌ ಮತ್ತು‌ ಸುವ್ಯವಸ್ಥೆಯನ್ನು‌ ನಿರ್ವಹಿಸಲು‌ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಇದ್ರೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸರಣಿ ಟ್ಬೀಟ್ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ,ಕನಕಪುರ ತಾಲೂಕಿನ ಸಾತನೂರು ಬಳಿ ಜಾನುವಾರು ಸಾಗಣೆ ಮಾಡುತ್ತಿದ್ದ ಕಾರಣಕ್ಕೆ ಯುವಕನೊಬ್ಬ ಹತ್ಯೆಗೀಡಾಗಿರುವುದು ಸರ್ವಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಕಳೆದ ಮೂರೂವರೆ ವರ್ಷದಲ್ಲಿ ಕರ್ನಾಟಕದ ಬಿಜೆಪಿ ಸರಕಾರ ವ್ಯವಸ್ಥಿತವಾಗಿ ಬೆಳೆಸಿ ಪೋಷಿಸಿರುವ ಅಸಹನೆ, ಅಸಹಿಷ್ಣುತೆಯೇ ಕಾರಣ ಎಂದು ಬರೆದಿದ್ದಾರೆ.


ಜಾನುವಾರು ಸಾಗಿಸುತ್ತಿದ್ದಾನೆ ಎಂದರೆ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬಹುದಿತ್ತು ಅಥವಾ ಮಾಹಿತಿ ನೀಡಬಹುದಿತ್ತು. ಅದರ ಹೊರತಾಗಿ ಹತ್ಯೆ ಮಾಡುವುದು ಎಂದರೆ ಅರ್ಥವೇನು? ಚುನಾವಣೆ ಹೊತ್ತಿನಲ್ಲಿ ಇದರ ಹಿಂದಿರುವ ಷಡ್ಯಂತ್ರ ಎಂಥದ್ದು ಎಂದು ಯಾರಿಗಾದರೂ ಅರ್ಥ ಆಗುವಂತದ್ದೇ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಯುವಕನ ಕೊಲೆಯಾದ ರಾತ್ರಿ ಆರೋಪಿ ಮತ್ತವನ ಸಹಚರರು ರಸ್ತೆಯಲ್ಲಿ ಕ್ರಿಕೆಟ್ ಬ್ಯಾಟುಗಳನ್ನು ಹಿಡಿದು ಗೋ ರಕ್ಷಕನ ಸೋಗು ಹಾಕಿಕೊಂಡು ಪಹರೆ ಕಾಯುವ ನಾಟಕದ ವಿಡಿಯೋ ಮಾಡಿ ತನ್ನ ಜಾಲತಾಣದಲ್ಲಿಯೇ ಹಾಕಿಕೊಂಡಿದ್ದಾನೆ.ಅವರ ಉದ್ದೇಶವೇ ಬೇರೆ ಇತ್ತು ಎನ್ನುವುದು ಸ್ಪಷ್ಟ.ಇದಕ್ಕಿಂತ ಸಾಕ್ಷಿ ಬೇಕೆ? ಕೂಡಲೇ ಪೊಲೀಸರು ಆರೋಪಿಗಳನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.