ಡೈಲಿ ವಾರ್ತೆ:03 ಏಪ್ರಿಲ್ 2023
ಈಶ್ವರಪ್ಪ ವಿರುದ್ಧ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಕಿಡಿ:ಈಶ್ವರಪ್ಪ ಬಗ್ಗೆ ಹಲವು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಬಿಜೆಪಿಯ ಹಿರಿಯ ನಾಯಕ
ಶಿವಮೊಗ್ಗ;ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್
ಅವರು ಬಿಜೆಪಿಯಲ್ಲಿ ಟಿಕೆಟ್ ಸಿಗುವ ಸಾಧ್ಯತೆ ಇಲ್ಲದ ಕಾರಣ ತಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್,ಈ ಬಾರಿ ಚುನಾವಣಾ ಕಣಕ್ಕಿಳಿಯಲೇಬೇಕು.
ಪಕ್ಷದ ವೇದಿಕೆಯಲ್ಲೂ ನಾನು ವಿನಂತಿ ಮಾಡಿಕೊಂಡಿದ್ದೇನೆ. ಆದರೆ ನನ್ನ ಪ್ರಯತ್ನಕ್ಕೆ ಪೂರಕವಾಗಿ ಬಿಜೆಪಿಯಲ್ಲಿ ಟಿಕೆಟ್ ಸಿಗಬಹುದು ಎಂಬ ಲಕ್ಷಣಗಳು ಕಂಡು ಬರುತ್ತಿಲ್ಲ ಇದರಿಂದ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಮೊನ್ನೆ ಈಶ್ವರಪ್ಪ ಹೇಳಿದ ಮಾತನ್ನು ಗಂಭೀರವಾಗಿ ಪರಿಗಣಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ತೀರ್ಮಾನಿಸಿದ್ದೇನೆ. ಈಶ್ವರಪ್ಪ ಅವರ ಏಕವಚನ ಪ್ರಯೋಗ ಅವರ ಶಿಕ್ಷಣದ ಮಟ್ಟ ತೋರಿಸುತ್ತಿದೆ.ಈಶ್ವರಪ್ಪ ನಾಲಿಗೆ ಮೇಲೆ ಹಿಡಿತ ಇಲ್ಲ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ನನಗೆ ಅವನದ್ಯಾವ ಲೆಕ್ಕ’ ಎಂದು ಈಶ್ವರಪ್ಪ ಹೇಳಿದ್ದನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ತಿಳಿಸಿದ್ದಾರೆ.
ಈಶ್ವರಪ್ಪ ಅವರಿಗೆ ಇನ್ನು ಲೆಕ್ಕ ಕೊಡಲು ಆರಂಭಿಸುತ್ತೇನೆ. ಈಶ್ವರಪ್ಪರ ಚುನಾವಣೆಯ ತಂತ್ರಗಳನ್ನು ಅರಿತಿದ್ದೇನೆ. ಶಿವಮೊಗ್ಗದಲ್ಲಿ ಮೊನ್ನೆ ನಾಲ್ಕೂವರೆ ಕೋಟಿ ರೂಪಾಯಿ ಸೀರೆ ಸಿಕ್ಕಿಬಿದ್ದಿದೆ.ಒಬ್ಬ 1.50 ಕೋಟಿ ರೂ ಕೊಂಡೊಯ್ಯುವಾಗ ಸಿಕ್ಕಿಬಿದ್ದಿದ್ದಾನೆ. ಈಶ್ವರಪ್ಪ ಅವರ ಬಳಿ ಅಪಾರ ದುಡ್ಡಿದೆ. ಚುನಾವಣೆಗಾಗಿ ವಾರ್ಡ್ ಗಳಲ್ಲಿ ಹಣ ಡಿಪಾಸಿಟ್ ಇಟ್ಟಿದ್ದೀರಿ ಎಂಬುದೂ ಗೊತ್ತಿದೆ. ಆದರೆ ಈ ಸಲ ನಿಮ್ಮ ಹಣ ಲೆಕ್ಕಕ್ಕೆ ಇಲ್ಲ ಎಂಬುದನ್ನು ತೋರಿಸುತ್ತೇನೆಂದು ಸವಾಲು ಹಾಕಿದರು.
32 ವರ್ಷಗಳ ಅಧಿಕಾರಾವಧಿಯಲ್ಲಿ ಕೆ.ಎಸ್.ಈಶ್ವರಪ್ಪ ಮಾಡಿದ್ದು ಏನೂ ಇಲ್ಲ.ಅಲ್ಲೊಂದು ಕಡೆ ಇಲ್ಲೊಂದು ಕಡೆ ಪ್ರಚೋದನಾತ್ಮಕ ಭಾಷಣ ಮಾಡಿ ಗಲಭೆ ಮಾಡಿಸಿ ಚುನಾವಣೆ ಮಾಡುತ್ತೀರಿ.ಈ ಬಾರಿ ಅದು ನಡೆಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಮಂಜುನಾಥ್ ಮಾರ್ಮಿಕವಾಗಿ ಹೇಳಿದ್ದಾರೆ.
ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಹೊರಟವರು ಅಹಿತಕರ ಘಟನೆ ಎಸಗುವ ಸಾಧ್ಯತೆ ಇದೆ. ಆದರೆ, ಯಾರೂ ಸಂಯಮ ಕಳೆದುಕೊಳ್ಳಬಾರದು. ಪೊಲೀಸರು ಮೈಮರೆಯಬಾರದು ಎಂದು ಆಯನೂರ್ ಮಂಜುನಾಥ್ ಹೇಳಿದ್ದಾರೆ.