ಡೈಲಿ ವಾರ್ತೆ:03 ಏಪ್ರಿಲ್ 2023

ಗುಲ್ವಾಡಿ ಆಂಜನೇಯ ಪ್ರತಿಷ್ಠಾ ವರ್ಧಂತಿ, ನಲವತ್ತೈದನೇ ವೀರ ವಿಜಯೋತ್ಸವ – ರಜತ ಮುಖವಾಡ ಸಮರ್ಪಣೆ

ಕುಂದಾಪುರ : ಗುಲ್ವಾಡಿಯ ಪ್ರಾಚೀನ ಆಂಜನೇಯ ದೇವಸ್ಥಾನವು ತುಂಬಾ ಶಿಥಿಲಗೊಂಡಿದ್ದು, 1978 ರಲ್ಲಿ ಗುಲ್ವಾಡಿ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ದೊಡ್ಮನೆ ಸದಾಶಿವ ಭಂಡಾರಿಯವರ ಅಧ್ಯಕ್ಷತೆಯಲ್ಲಿ ಐದು ಮಂದಿಯ ಸಮಿತಿ ರಚಿಸಿ, ಗ್ರಾಮಸ್ಥರ ನೆರವಿನೊಂದಿಗೆ ಜೀರ್ಣೋದ್ದಾರ ಕಾರ್ಯಗಳನ್ನು ನಡೆಸಲಾಯಿತು. ಇಂದು ದೇವರ ಅನುಗ್ರಹದಿಂದ ಆಂಜನೇಯನಿಗೆ ರಜತ ಮುಖವಾಡ ಸಮರ್ಪಿಸುವ ಶುಭಯೋಗ ಬಂದಿದೆ. ಪ್ರಸ್ತುತ ಚೇತನ್ ರೈ ಯವರ ನೇತೃತ್ವದ ಆಡಳಿತ ಮಂಡಳಿಯು ಉತ್ತಮ ಕಾರ್ಯಗಳನ್ನು ನಡೆಸುತ್ತಿದೆ ಎಂದು ನಿವೃತ್ತ ಮುಖ್ಯೊಪಾಧ್ಯಾಯ ಯು. ವೆಂಕಟರಮಣ ಹೊಳ್ಳ ಹೇಳಿದರು.



ಗುಲ್ವಾಡಿಯ ಶ್ರೀ ಆಂಜನೇಯ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮತ್ತು ನಲವತ್ತೈದನೇ ವೀರ ವಿಜಯೋತ್ಸವ ಸಂದರ್ಭದಲ್ಲಿ ತಮ್ಮ ಧರ್ಮಪತ್ನಿ ದಿವಂಗತ ಪ್ರೇಮಲತಾ ವಿ. ಹೊಳ್ಳ ಸ್ಮರಣಾರ್ಥ ಕುಟುಂಬಿಕರೊಂದಿಗೆ ಶ್ರೀ ಆಂಜನೇಯನಿಗೆ ರಜತ ಮುಖವಾಡವನ್ನು ಸಮರ್ಪಿಸಿ ಅವರು ಮಾತನಾಡಿದರು. ದಾನಿಗಳ ಪರವಾಗಿ ಹಿರಿಯ ಪತ್ರಕರ್ತ ಕೆ. ಜಿ. ವೈದ್ಯ ಸಂಕಲ್ಪ ಪೂರ್ವಕ ಧಾರ್ಮಿಕವಿಧಿಗಳನ್ವಯ ರಜತ ಮುಖವಾಡವನ್ನು ಅರ್ಚಕ ವೇದಮೂರ್ತಿ ನರಸಿಂಹ ಮೂರ್ತಿ ಉಪಾಧ್ಯಾಯರಿಗೆ ಹಸ್ತಾಂತರಿಸಿದರು.

ಸಮಾರಂಭದಂಗವಾಗಿ ಗಣಹೋಮ, ಅಧಿವಾಸ ಹೋಮ, ಶ್ರೀ ಆಂಜನೇಯನಿಗೆ ಬ್ರಹ್ಮಕಲಶಾಭಿಷೇಕ, ಮಹಾರಂಗಪೂಜೆ ಇತ್ಯಾದಿ ಧಾರ್ಮಿಕ ವಿಧಿಗಳು, ರಜತ ಮುಖವಾಡ ತೊಡಿಸಿ ವಿಶೇಷ ಪೂಜೆಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಆಡಳಿತ ಮಂಡಳಿ ಅಧ್ಯಕ್ಷ ಚೇತನ್ ಕುಮಾರ ರೈ, ಗ್ರಾಮ ರಕ್ಷಕನಾದ ಆಂಜನೇಯನ ದೇವಳದಲ್ಲಿ 45 ನೇ ವೀರ ವಿಜಯೋತ್ಸವದ ಸಂದರ್ಭದಲ್ಲಿ ಪೌಳಿ ರಚನೆ ಇತ್ಯಾದಿ ಅಭಿವೃದ್ಧಿ ಕಾರ್ಯಗಳನ್ನು ಯೋಜಿಸಲಾಗಿದೆ. ದಾನಿಗಳು ಉದಾರ ದೇಣಿಗೆಗಳನ್ನಿತ್ತು ಸಹಕರಿಸಬೇಕು ಎಂದು ಮನವಿ ಮಾಡಿದರು.

ರಜತ ಮುಖವಾಡ ದಾನಿಗಳ ಕುಟುಂಬ ಸದಸ್ಯರಾದ ವೇದಮೂರ್ತಿ ಅವನೀಶ ಹೊಳ್ಳ – ಪದ್ಮಲತಾ ದಂಪತಿ, ದೇವಳದ
ಪ್ರಧಾನ ಅರ್ಚಕ ವೇದಮೂರ್ತಿ ನರಸಿಂಹಮೂರ್ತಿ ಉಪಾಧ್ಯಾಯ, ವೇದಮೂರ್ತಿ ಸೂರ್ಯ ನಾರಾಯಣ ಉಪಾಧ್ಯಾಯ, ವೇದಮೂರ್ತಿ ಶ್ರೀನಿವಾಸ ಉಪಾಧ್ಯಾಯ, ಘನವತಿ, ಜಯರಾಮ ಹೆಗ್ಡೆ, ಕುಪ್ಪ, ಅಭಿನಂದನ್, ಸತೀಶ್ ಮೊಗವೀರ, ಶಿವರಂಜನ್ ಶೆಟ್ಟಿ, ಚಂದ್ರಣ್ಣ, ಉಮೇಶ್ ಶೆಟ್ಟಿ, ಪ್ರೀತಮ್ ಮೊದಲಾದವರು ಉಪಸ್ಥಿತರಿದ್ದರು. ತನ್ಮಯ್ ಮತ್ತು ತಂಡದವರು ಸ್ವಯಂ ಸೇವಕರಾಗಿ ಸಹಕರಿಸಿದರು. ವಿವಿಧ ಭಜನಾ ಮಂಡಳಿಗಳವರಿಂದ ಭಜನೆ, ರಾತ್ರಿ ಅಂತರ್ ರಾಷ್ಟ್ರೀಯ ಖ್ಯಾತಿಯ ಉಪ್ಪಿನಕುದ್ರು ಶ್ರೀ ಗಣೇಶ ಬೊಂಬೆಯಾಟ ಮಂಡಳಿಯವರಿಂದ ಬೊಂಬೆಯಾಟ ನಡೆಯಿತು.