

ಕುಂಭಾಸಿ: ಮೊಬೈಲ್ ಟವರ್‌ನಲ್ಲಿದ್ದ 8 ಎಕ್ಸೈಡ್ ಬ್ಯಾಟರಿಗಳ ಕಳವು

ಕುಂದಾಪುರ: ಇಲ್ಲಿನ ಕುಂಭಾಸಿ ಗ್ರಾಮದ ಮೊಬೈಲ್ ಟವರ್ ಒಂದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬ್ಯಾಟರಿಗಳನ್ನು ಕಳ್ಳರು ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆಯ ‘ತೇಜ ಟೆಕ್ನಿಕಲ್ ಸರ್ವೀಸ್’ ಸಂಸ್ಥೆಯಲ್ಲಿ ಎಸ್ಟೇಟ್ ಮ್ಯಾನೇಜರ್ ಆಗಿರುವ ನಾಗಕುಮಾರ್ ಸಿ.ಆರ್. ಅವರು ಕುಂಭಾಸಿ ಗ್ರಾಮದ ಸರ್ವೇ ನಂಬ್ರ 12*11 ರಲ್ಲಿರುವ ಟವರ್‌ಗೆ ಕಳೆದ ಸೆಪ್ಟೆಂಬರ್‌ನಲ್ಲಿ 24 ಸೆಲ್‌ಗಳಿರುವ ಎಕ್ಸೈಡ್ (EXIDE) ಕಂಪೆನಿಯ ಬ್ಯಾಟರಿ ಬ್ಯಾಂಕ್ ಅಳವಡಿಸಿದ್ದರು. ಈ ಟವರ್‌ನ ನಿರ್ವಹಣೆಯನ್ನು ಟೆಕ್ನೀಶಿಯನ್ ಅವಿನಾಶ್ ಶೆಟ್ಟಿ ಅವರಿಗೆ ವಹಿಸಲಾಗಿತ್ತು.
ದಿನಾಂಕ 08/11/2025 ರಂದು ಅವಿನಾಶ್ ಶೆಟ್ಟಿ ಅವರು ಪರಿಶೀಲನೆ ನಡೆಸಿದಾಗ ಬ್ಯಾಟರಿಗಳು ಸುಸ್ಥಿತಿಯಲ್ಲಿದ್ದವು. ಆದರೆ, ದಿನಾಂಕ 10/11/2025 ರಂದು ಪುನಃ ಭೇಟಿ ನೀಡಿದಾಗ ಬ್ಯಾಟರಿ ಬ್ಯಾಂಕ್‌ನಲ್ಲಿದ್ದ 8 ಬ್ಯಾಟರಿಗಳನ್ನು ಕಿಡಿಗೇಡಿಗಳು ಕಳವು ಮಾಡಿರುವುದು ಕಂಡುಬಂದಿದೆ.
ಈ ಬಗ್ಗೆ ನಾಗಕುಮಾರ್ ಅವರು ನೀಡಿದ ದೂರಿನನ್ವಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 10/2026 ರಂತೆ, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.