ಡೈಲಿ ವಾರ್ತೆ: ಫೆ./11/2026

ಭಾವೈಕ್ಯತೆಯ ಬೆಡಗು: ಅನಾಥ ಹಿಂದೂ ಮಕ್ಕಳನ್ನು ಸಾಕಿ, ಹಿಂದೂ ಧರ್ಮದಂತೆಯೇ ಮದುವೆ ಮಾಡಿದ ಮುಸ್ಲಿಂ ದಂಪತಿ!

ಬೆಳಗಾವಿ, ಫೆ. 11: ಧರ್ಮ-ಜಾತಿ ಭೇದಗಳನ್ನು ಮೀರಿ ಮಾನವೀಯತೆ ಗೆಲುವು ಸಾಧಿಸಿದ ಅಪರೂಪದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ನಡೆದಿದೆ.

ಮುಸ್ಲಿಂ ದಂಪತಿಯಾದ ಮೆಹಬೂಬ್ ನಾಯಿಕವಾಡಿ ಮತ್ತು ನೂರ್‌ಜಾನ್ ದಂಪತಿ ಸುಮಾರು 20 ವರ್ಷಗಳ ಹಿಂದೆ ದತ್ತು ಪಡೆದ ಹಿಂದು ಬಾಲಕನಿಗೆ ಹಿಂದು ಸಂಪ್ರದಾಯದಂತೆ ಮದುವೆ ನೆರವೇರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಸೋಮಶೇಖರ್ ಪೂಜಾರ್ ಮತ್ತು ವಸಂತ ಪೂಜಾರ್ ಎಂಬ ಇಬ್ಬರು ಸಹೋದರರು ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದರು. ಆ ವೇಳೆ ಸೋಮಶೇಖರ್‌ಗೆ ನಾಲ್ಕು ವರ್ಷ ಮತ್ತು ವಸಂತಗೆ ಎರಡು ವರ್ಷ ವಯಸ್ಸಾಗಿತ್ತು. ತಂದೆ-ತಾಯಿ ನಿಧನದ ಬಳಿಕ ಕುಟುಂಬಸ್ಥರು ಮಕ್ಕಳನ್ನು ನೋಡಿಕೊಳ್ಳಲು ಮುಂದಾಗದ ಹಿನ್ನೆಲೆ ಅವರ ಭವಿಷ್ಯ ಅನಿಶ್ಚಿತವಾಗಿತ್ತು.
ಈ ಸಂದರ್ಭದಲ್ಲಿ ಪಕ್ಕದ ಮನೆಯಲ್ಲೇ ವಾಸಿಸುತ್ತಿದ್ದ ಮೆಹಬೂಬ್ ಮತ್ತು ನೂರ್‌ಜಾನ್ ದಂಪತಿ ಮಾನವೀಯತೆಯಿಂದ ಪ್ರೇರಿತರಾಗಿ ತಮ್ಮ ಐವರು ಮಕ್ಕಳ ಜೊತೆಗೆ ಈ ಇಬ್ಬರು ಬಾಲಕರನ್ನೂ ದತ್ತು ಸ್ವೀಕರಿಸಿದರು. ಧರ್ಮ ವಿಭಿನ್ನವಾಗಿದ್ದರೂ ಮಕ್ಕಳನ್ನು ಹಿಂದು ಸಂಪ್ರದಾಯದಂತೆ ಬೆಳೆಸಿದ ಅವರು, ಶಿಕ್ಷಣ ಹಾಗೂ ಜೀವನ ರೂಪಿಕೆಯಲ್ಲಿ ಸಂಪೂರ್ಣ ಬೆಂಬಲ ನೀಡಿದರು.

ಈಗ ದೊಡ್ಡವನಾದ ಸೋಮಶೇಖರ್ ಪೂಜಾರ್ ಅವರ ಮದುವೆಯನ್ನು ಹಿಂದು ಸಂಪ್ರದಾಯದಂತೆ ಸಂಪ್ರದಾಯಬದ್ಧವಾಗಿ ನೆರವೇರಿಸಲಾಗಿದೆ. ಮದುವೆ ಸಂದರ್ಭದಲ್ಲಿ ಮೆಹಬೂಬ್ ಮತ್ತು ನೂರ್‌ಜಾನ್ ದಂಪತಿ ತಾವೇ ತಂದೆ-ತಾಯಿ ಸ್ಥಾನದಲ್ಲಿ ನಿಂತು ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿದರು.

ಪ್ರಸ್ತುತ ಸಮಾಜದಲ್ಲಿ ಜಾತಿ-ಧರ್ಮದ ಹೆಸರಿನಲ್ಲಿ ಸಂಘರ್ಷಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಈ ದಂಪತಿ ತೋರಿದ ಮಾನವೀಯತೆ ಮತ್ತು ಸೌಹಾರ್ದ ಮನೋಭಾವ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಬಸ್ತವಾಡ ಗ್ರಾಮದಲ್ಲಿ ನಡೆದ ಈ ಘಟನೆ ಸಾಮಾಜಿಕ ಸೌಹಾರ್ದತೆ ಮತ್ತು ಭಾವೈಕ್ಯತೆಗೆ ಸ್ಪಷ್ಟ ಉದಾಹರಣೆಯಾಗಿ ಪರಿಣಮಿಸಿದೆ.