ಡೈಲಿ ವಾರ್ತೆ:04 ಏಪ್ರಿಲ್ 2023

ದಕ್ಷಿಣ ಕನ್ನಡ:ಕೆಂಪುಬಟ್ಟೆ ಕೈಯಲ್ಲಿ ಪ್ರದರ್ಶಿಸಿ ರೈಲು ಅಪಘಾತ ತಪ್ಪಿಸಿದ 70ರ ಹರೆಯದ ಮಹಿಳೆ.!

ಮಂಗಳೂರು;70ರ ಹರೆಯದ ಮಹಿಳೆಯ ಸಮಯಪ್ರಜ್ಞೆಯಿಂದ ಸಾಂಭವ್ಯ ರೈಲ್ವೇ ಅವಘಡ ತಪ್ಪಿದ್ದು, ಮಹಿಳೆಯ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಪಚ್ಚನಾಡಿ ಸಮೀಪ ಮಂದಾರದಲ್ಲಿ ಮಾ.21ರಂದು ಮಧ್ಯಾಹ್ನ ಹಳಿಯೊಂದಕ್ಕೆ ಮರ ಬಿದ್ದಿತ್ತು. ರೈಲು ಹಳಿಗೆ ಮರ ಬಿದ್ದದ್ದನ್ನು ಗಮನಿಸಿದ 70ರ ಮಹಿಳೆ ಚಂದ್ರಾವತಿ ಮೊದಲು ಏನು ಮಾಡಬೇಕೆಂದು ತೋಚದೆ ಮನೆಗೆ ತೆರಳುತ್ತಾರೆ. ಈ ವೇಳೆ ಮಧ್ಯಾಹ್ನದ ಮುಂಬೈ ತೆರಳುವ ರೈಲು ಶಬ್ಧ ಕೇಳುತ್ತದೆ. ತತ್‌ಕ್ಷಣವೇ ಎಚ್ಚೆತ್ತುಕೊಂಡು ಓಡೋಡಿ ಬಂದ ಸಮಯಪ್ರಜ್ಞೆಯಿಂದ ಕೆಂಪುಬಟ್ಟೆಯನ್ನು ಕೈಯಲ್ಲಿ ಪ್ರದರ್ಶಿಸಿದ್ದಾರೆ.

ಅಪಾಯ ಅರಿತ ಲೋಕೋಪೈಲೆಟ್‌ ರೈಲಿನ ವೇಗವನ್ನು ಕಡಿಮೆ ಮಾಡಿ ರೈಲನ್ನು ನಿಲ್ಲಿಸಿ ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ.
ಬಳಿಕ ಸ್ಥಳೀಯರು ಹಾಗೂ ರೈಲ್ವೇ ಇಲಾಖೆಯ ಸಿಬ್ಬಂದಿಗಳು ಸೇರಿ ಮರವನ್ನು ತೆರವು ಮಾಡಿದರು.

ಈ ಬಗ್ಗೆ ಮಾತನಾಡಿದ ಚಂದ್ರಾವತಿ ಅವರು ‌ನನಗೆ ಹೃದಯದ ಆಪರೇಷನ್‌ ಆಗಿತ್ತು. ಆದರೂ ಲೆಕ್ಕಿಸದೆ ಓಡಿ ಬಂದು ಅನಾಹುತವನ್ನು ತಪ್ಪಿಸಿದ್ದೇನೆ ಎಂದು ಹೇಳಿದ್ದಾರೆ. 70ರ ಹರೆಯದ ಮಹಿಳೆಯ ಸಮಯಪ್ರಜ್ಞೆಗೆ ಎಲ್ಲರೂ ಕೊಂಡಾಡಿದ್ದಾರೆ.