

ಡೈಲಿ ವಾರ್ತೆ: ಫೆ./11/2026
ಲೋಕಾಯುಕ್ತ ಬಲೆಗೆ ‘ಪಿಡಬ್ಲ್ಯುಡಿ’ ಅಧಿಕಾರಿಗಳು: ಬಿಲ್ ಮಂಜೂರಾತಿಗೆ ಲಂಚ ಪಡೆಯುವಾಗ ಇಬ್ಬರ ಬಂಧನ

ಹೊಸಪೇಟೆ (ವಿಜಯನಗರ): ಅಭಿವೃದ್ಧಿ ಕಾಮಗಾರಿಗಳ ಬಿಲ್ ಮಂಜೂರು ಮಾಡಲು ಗುತ್ತಿಗೆದಾರರಿಂದ ಹಣದ ಬೇಡಿಕೆಯಿಟ್ಟಿದ್ದ ಲೋಕೋಪಯೋಗಿ ಇಲಾಖೆಯ (PWD) ಎಕ್ಸಿಕ್ಯೂಟಿವ್ ಎಂಜಿನಿಯರ್ ಹಾಗೂ ಅಕೌಂಟೆಂಟ್ ಮೇಲೆ ಲೋಕಾಯುಕ್ತ ಪೊಲೀಸರು ಮಿಂಚಿನ ದಾಳಿ ನಡೆಸಿ ಬಂಧಿಸಿದ್ದಾರೆ.
ಘಟನೆಯ ವಿವರ:
ವಿಜಯನಗರ ಜಿಲ್ಲೆಯ ಹೊಸಪೇಟೆಯ ಪಿಡಬ್ಲ್ಯುಡಿ ಕಚೇರಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಎಕ್ಸಿಕ್ಯೂಟಿವ್ ಎಂಜಿನಿಯರ್ ದೇವದಾಸ್ ಹಾಗೂ ಅಕೌಂಟೆಂಟ್ ಮಾರುತಿ ಬಂಧಿತ ಅಧಿಕಾರಿಗಳು. ಹೂವಿನಹಡಗಲಿಯ ಗುತ್ತಿಗೆದಾರ ಮಹೇಶ್ ಹಲಗೇರಿ ಎಂಬುವವರು ತಾವು ಪೂರ್ಣಗೊಳಿಸಿದ್ದ ಕಾಮಗಾರಿಯ ಬಿಲ್ ಬಿಡುಗಡೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಕೆಲಸಕ್ಕಾಗಿ ಅಧಿಕಾರಿಗಳು 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
ಅಧಿಕಾರಿಗಳ ಕಿರುಕುಳದಿಂದ ಬೇಸತ್ತ ಮಹೇಶ್ ಹಲಗೇರಿ ಅವರು ಲೋಕಾಯುಕ್ತ ಮೆಟ್ಟಿಲೇರಿದ್ದರು.
ಇದರಿಂದಾಗಿ ಭ್ರಷ್ಟ ಅಧಿಕಾರಿಗಳು ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಹೊಂಚು ಹಾಕಿದ್ದ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಧಿಕಾರಿಗಳನ್ನು ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ತನಿಖಾ ತಂಡ:
ಲೋಕಾಯುಕ್ತ ಡಿವೈಎಸ್ಪಿ ಸಚಿನ್ ಎಸ್. ಛಲವಾದಿ ಅವರ ನೇತೃತ್ವದಲ್ಲಿ, ಪಿಐಗಳಾದ ರಾಜೇಶ್ ಲಮಾಣಿ, ಅಮರೇಶ್ ಹುಬ್ಬಳ್ಳಿ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ಈ ಯಶಸ್ವಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದೆ. ಬಂಧಿತರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ವಿಚಾರಣೆ ಪ್ರಗತಿಯಲ್ಲಿದೆ.
ಸತತ ದಾಳಿ: ಭ್ರಷ್ಟ ಅಧಿಕಾರಿಗಳಲ್ಲಿ ನಡುಕ
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ತೀವ್ರಗೊಂಡಿದೆ. ಕಳೆದ ತಿಂಗಳುವಷ್ಟೇ ಕಲಬುರಗಿಯ ಕಮಲಾಪುರ ತಹಶೀಲ್ದಾರ್ ಕಚೇರಿಯ ಎಫ್‌ಡಿಎ ಶಶಿಕುಮಾರ್ ಅವರು ಜಮೀನು ದಾಖಲೆಗಾಗಿ 20,000 ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು. ಈಗ ಪಿಡಬ್ಲ್ಯುಡಿ ಇಲಾಖೆಯ ಉನ್ನತ ಅಧಿಕಾರಿಗಳೇ ಬಲೆಗೆ ಬಿದ್ದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.