ಬಸ್ ಡ್ರೈವರ್ ಸುಕ್ರ ನಾಯ್ಕ್

ಡೈಲಿ ವಾರ್ತೆ:07 ಏಪ್ರಿಲ್ 2023

ಕೋಟ: ಮುಂಬೈ ಬಸ್ ಚಾಲಕನ ದಾದಾಗಿರಿ ಯುವಕರ ಮೇಲೆ ಹಲ್ಲೆ, ದೂರು ದಾಖಲು

ಕೋಟ: ಮಂಗಳೂರಿನಿಂದ ಮುಂಬೈಗೆ ಹೋಗುತ್ತಿದ್ದ ಖಾಸಗಿ ಬಸ್ಸಿನ ಚಾಲಕ ಇತರ ಸಿಬಂದಿಗಳ ಜತೆ ಇಬ್ಬರು ಯುವಕರ ಮೇಲೆ ದಾದಾಗಿರಿ ನಡೆಸಿ ಹಲ್ಲೆ ಮಾಡಿದ ಘಟನೆ ಶುಕ್ರವಾರ ಸಂಜೆ ರಾ.ಹೇ. 66ರ ಕೋಟ ಬಾಳೆಬೆಟ್ಟಿ ಬಳಿ ಇಂದ್ರಪ್ರಸ್ಥ ಹೋಟೆಲ್ ಸಮೀಪ ನಡೆದಿದೆ.

ಹಲ್ಲೆಗೊಳಗಾಗಿರು ರಾಘವೇಂದ್ರ ಶೆಟ್ಟಿ(34), ಹಾಗೂ ಸುರೇಶ್ ಕುಲಾಲ್ (32) ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ರಾಘು ಹಾಗೂ ಸುರೇಶ ಕೋಟ ರಾ.ಹೇ. ಬಳಿ ಬೈಕಿನಲ್ಲಿ ಸಾಗುತ್ತಿದ್ದಾಗ ಅಪರಿಮಿತ ವೇಗದಲ್ಲಿ ಬಂದ ಕೆನರಾ ಪಿಂಟೋ ಟ್ರಾವೆಲ್ಸ್ ಬೈಕಿಗೆ ಸವರಿ ಕೊಂಡು ಹೋಗಿ ತುಸು ದೂರದಲ್ಲಿರುವ ಹೋಟೆಲ್ ಹತ್ತಿರ ಉಪಹಾರಕ್ಕಾಗಿ ನಿಂತಿತ್ತು. ಬಸ್ಸಿನ ಮಾರಣಾಂತಿಕ ಚಾಲನೆಗೆ ಬೆಚ್ಚಿ ಬಿದ್ದ ಬೈಕ್ ಸವಾರರು ಹೋಟೆಲ್ ಬಳಿ ಹೋಗಿ ಚಾಲಕ ಸುಕ್ರ ನಾಯ್ಕ್ ಬಳಿ ವಿಚಾರಿಸಿದಾಗ ಥೇಟ್ ಮುಂಬೈ ದಾದಾನಂತೆ ವರ್ತಿಸಿದ ಆತ ಇತರ ಸಿಬಂದಿಗಳ ಜತೆ ಸೇರಿ ಹಲ್ಲೆ ನಡೆಸಿದ್ದಾನೆನ್ನಲಾಗಿದೆ. ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಚಾಲಕನ ಅತಿರೇಕಕ್ಕೆ ಆಕ್ರೋಶ ವ್ಯಕ್ತಪಡಿಸಿ ಹಲ್ಲೆಗೂ ಮುಂದಾಗಿದ್ದು ತಕ್ಷಣ ಆಗಮಿಸಿದ ಕೋಟ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿದರು.
ಈ ಹಲ್ಲೆ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.