ಡೈಲಿ ವಾರ್ತೆ:12 ಏಪ್ರಿಲ್ 2023
ಉಡುಪಿ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ರಘುಪತಿ ಭಟ್ ಸ್ವತಂತ್ರವಾಗಿ ಸ್ಪರ್ಧೆ? ಏನಿದು ಬೆಳವಣಿಗೆ?
ಉಡುಪಿ: ಬಿಜೆಪಿ ನಿನ್ನೆ 189 ಅಭ್ಯರ್ಥಿಗಳ ಹೊಸ ಪಟ್ಟಿ ಬಿಡುಗಡೆಗೊಳಿಸಿತ್ತು. ಇದರ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದೆ.
ಕೆಲವು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಹೊಸ ಮುಖಗಳಿಗೆ ಟಿಕೆಟ್ ನೀಡಿರುವುದು ಅಸಮಾಧಾನ ಸ್ಪೋಟಕ್ಕೆ ಕಾರಣವಾಗಿದೆ. ಉಡುಪಿಯಲ್ಲಿ ಹಾಲಿ ಶಾಸಕ ರಘುಪತಿ ಭಟ್ ಗೆ ಕೈಕೊಟ್ಟು ಯಶ್ ಪಾಲ್ ಸುವರ್ಣಗೆ ಟಿಕೆಟ್ ನೀಡಲಾಗಿದೆ. ಇದರಿಂದ ಶಾಸಕ ರಘುಪತಿ ಭಟ್ ಅಸಮಾಧಾನಗೊಂಡಿದ್ದಾರೆ.
ಉಡುಪಿ ಹಾಲಿ ಶಾಸಕ ರಘುಪತಿ ಭಟ್ ಅವರು ಇಂದು ತಮ್ಮ ನಿವಾಸದಲ್ಲಿ ಅಭಿಮಾನಿಗಳ ಸಭೆ ಕರೆದಿದ್ದು, ಮುಂದಿನ ರಾಜಕೀಯ ನಿಲುವಿನ ಬಗ್ಗೆ ಭಟ್ ನಿರ್ಧರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಭಿಮಾನಿಗಳ ಒತ್ತಡಕ್ಕೆ ಮಣಿದು ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದ್ದಾರೆ ಎಂದು ರಘುಪತಿ ಭಟ್ ಅವರ ಮೂಲಗಳು ತಿಳಿಸಿವೆ.
ಎರಡು ದಿನಗಳ ಹಿಂದೆಯೇ ಸ್ವತಂತ್ರವಾಗಿ ಸ್ಪರ್ಧಿಸುವ ಕುರಿತ ಕೆಲಸ ಆರಂಭವಾಗಿದ್ದು, ಏಪ್ರಿಲ್ 12 ಬುಧವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.
ರಘುಪತಿ ಭಟ್ ಅವರು ಉಡುಪಿಯಿಂದ ಮೂರು ಬಾರಿ ಶಾಸಕರಾಗಿದ್ದು, ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿದ್ದಾರೆ. ಇದೀಗ ಅವರಿಗೆ ಬಿಜೆಪಿ ಕೈಕೊಟ್ಟಿದ್ದು ಅಸಮಾಧಾನ ಸ್ಪೋಟಕ್ಕೆ ಕಾರಣವಾಗಿದೆ.