ಡೈಲಿ ವಾರ್ತೆ:12 ಏಪ್ರಿಲ್ 2023
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟನೆ.
ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಅವರ ಚುನಾವಣಾ ಕಚೇರಿಯು ಉದ್ಘಾಟನೆಯು ಬಿ ಸಿ ರೋಡಿನ ಪದ್ಮ ಪೆಟ್ರೋಲ್ ಬಂಕ್ ಮುಂಭಾಗದಲ್ಲಿರುವ ಧನಲಕ್ಷ್ಮಿ ಕಾಂಪ್ಲೆಕ್ಸಿನಲ್ಲಿ ಬುಧವಾರ ನಡೆಯಿತು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮೊಡಂಕಾಪುಗುತ್ತು ಜನಾರ್ದನ ಶೆಟ್ಟಿ, ಕಂಗಿಹಿತ್ಲು ರಾಮಣ್ಣ ಪೂಜಾರಿ, ಜಿನರಾಜ ಆರಿಗ, ಹಾಜಿ ಬಿ ಎಚ್ ಖಾದರ್ ಬಂಟ್ವಾಳ, ನಿವೃತ್ತ ಯೋಧ ವಲೇರಿಯನ್ ಡಿ’ಸೋಜ, ಶ್ರೀಮತಿ ಬೇಬಿ ನಾಯ್ಕ ಸಜಿಪಮುನ್ನೂರು, ಬಾಳಪ್ಪ ಶೆಟ್ಟಿ ಹೊಗೆನಾಡು – ಕರೋಪಾಡಿ ಅವರುಗಳು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಕ್ಷದ ಅಭ್ಯರ್ಥಿ ಬಿ ರಮಾನಾಥ ರೈ ಮಾತನಾಡಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳ ಮಾಡಬೇಕಾದ ಕನಸುಗಳನ್ನು ಹೊಂದಿದ್ದು, ಅದನ್ನು ಕಾರ್ಯರೂಪಕ್ಕೆ ತರಲು ಮತ್ತು ಈಗಾಗಲೇ ಅರ್ಧದಲ್ಲಿ ನಿಂತ ಕಾಮಗಾರಿಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ಆಶೀರ್ವಾದ ಮಾಡಬೇಕು ಎಂದರು.
ಇದೇ ವೇಳೆ ನೂತನ ಕಚೇರಿಗೆ ಭೇಟಿ ನೀಡಿದ ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು ಟಿ ಖಾದರ್ ಮಾತನಾಡಿ, ರಮಾನಾಥ ರೈ ಅವರು ಮುಂದಿನ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಜಯಗಳಿಸಿ ಮತ್ತೊಮ್ಮೆ ಈ ರಾಜ್ಯದಲ್ಲಿ ಸಚಿವರಾಗಿ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಸಪಲ್ಯ, ಪ್ರಮುಖರಾದ ಧನಭಾಗ್ಯ ಆರ್ ರೈ, ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ. ಪದ್ಮಶೇಖರ ಜೈನ್, ಎಂ.ಎಸ್. ಮುಹಮ್ಮದ್, ಸುದರ್ಶನ್ ಜೈನ್, ಜಯಂತಿ ಪೂಜಾರಿ, ಲವೀನಾ ವಿಲ್ಮಾ ಮೊರಾಸ್, ಮಲ್ಲಿಕಾ ವಿ ಶೆಟ್ಟಿ, ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಜೋರಾ, ಕೆ ಕೆ ಶಾಹುಲ್ ಹಮೀದ್, ಅರ್ಶದ್ ಸರವು, ಆಲ್ಬರ್ಟ್ ಮೆನೇಜಸ್, ಬಿ ಎಂ ಅಬ್ಬಾಸ್ ಅಲಿ, ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಜೆಸಿಂತಾ ಡಿ ಸೋಜ, ಬಾಲಕೃಷ್ಣ ಆಳ್ವ, ಸಿದ್ದೀಕ್ ಸರವು, ಸಿರಾಜ್ ಮದಕ, ನ್ಯಾಯವಾದಿಗಳಾದ ಚಂದ್ರಶೇಖರ್ ಪೂಜಾರಿ, ಚಿದಾನಂದ ಕಡೇಶ್ವಾಲ್ಯ, ಸುರೇಶ್ ನಾವೂರು, ಎ ಪಿ ಮೊಂತೆರೋ, ಉಮಾಕರ ಮೊದಲಾದವರು ಭಾಗವಹಿಸಿದ್ದರು.