ಡೈಲಿ ವಾರ್ತೆ:13 ಏಪ್ರಿಲ್ 2023

ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ: ಬೈಂದೂರು ಕ್ಷೇತ್ರದಿಂದ ಗುರುರಾಜ್ ಗಂಟಿಹೊಳೆ

ಕುಂದಾಪುರ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ರಾತ್ರಿ ಬಿಡುಗಡೆ ಮಾಡಿದೆ. ಕರಾವಳಿಯಲ್ಲಿ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಅವರಿಗೆ ಟಿಕೇಟ್ ನಿರಾಕರಿಸಲಾಗಿದ್ದು, ಸಂಘ ಪರಿವಾರದ ಮುಂಚೂಣಿ ಮುಖಂಡ ಗುರುರಾಜ್ ಗಂಟಿಹೊಳೆ ಅವರಿಗೆ ಟಿಕೇಟ್ ನೀಡಲಾಗಿದೆ.

ಬೈಂದೂರು ತಾಲೂಕಿನ ಬಿಜೂರು ಸಮೀಪದ ಗಂಟಿಹೊಳೆಯ ಗುರುರಾಜ್ ಶೆಟ್ಟಿ ಗಂಟಿಹೊಳೆಗೆ ಬೈಂದೂರು ಬಿಜೆಪಿಯ ಟಿಕೆಟ್ ಘೋಷಣೆಯಾಗುವ ಮೂಲಕ ಅಧಿಕೃತ ಅಭ್ಯರ್ಥಿ ಎನ್ನಿಸಿಕೊಂಡಿದ್ದಾರೆ. ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಗುರುರಾಜ್ ಗಂಟೆಹೊಳೆ ಆರೆಸ್ಸೆಸ್ ಸ್ವಯಂಸೇವಕರಾಗಿದ್ದಾರೆ.

ಹಲವಾರು ವರ್ಷಗಳ ಕಾಲ ತನ್ನ ಕುಟುಂಬವನ್ನೇ ತೊರೆದು ಸಂಘಕ್ಕಾಗಿ ಸೇವೆ ಸಲ್ಲಿಸಿದ ಅವರು ಸುಳ್ಯ, ಪುತ್ತೂರು ಭಾಗಗಳಲ್ಲಿ ಪ್ರಚಾರಕರಾಗಿದ್ದವರು. ಪ್ರಸ್ತುತ ಶಿಕ್ಷಣ ಸಂಸ್ಥೆಯೊಂದರ ವಿಶ್ವಸ್ಥರಾಗಿರುವ ಗುರುರಾಜ್ ಸಾಲ ಮಾಡಿ ಹಲವಾರು ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸ ನೀಡುತ್ತಿದ್ದಾರೆ.
ಒಟ್ಟಾರೆಯಾಗಿ ಕಳೆದ ಹಲವಾರು ದಿನಗಳಿಂದ ಕುತೂಹಲಕ್ಕೆ ಕಾರಣವಾಗಿದ್ದ ಬೈಂದೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಗೆ ತೆರೆಬಿದ್ದಂತಾಗಿದೆ. ಇನ್ನೇನಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಚುನಾವಣಾ ಹಣಾಹಣಿಯಷ್ಟೇ ಬಾಕಿಯಿದೆ.