ಡೈಲಿ ವಾರ್ತೆ:13 ಏಪ್ರಿಲ್ 2023

ಬಾವಿಕೇರಿ: ರಿಕ್ಷಾ ಡಿಕ್ಕಿಯಾಗಿ ಗರ್ಭಿಣಿ ಮಹಿಳೆ ಮೃತ್ಯು!

ಅಂಕೋಲಾ: ಆಟೊ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಮಹಿಳೆ ಮೃತಪಟ್ಟ ಘಟನೆ ಅಂಕೋಲಾದ ಭಾವಿಕೇರಿಯಲ್ಲಿ ನಡೆದಿದೆ.

ಅಂಕೋಲಾದ ಶೋಭಾ ಗೋಪಾಲ(28) ಮೃತಪಟ್ಟವರಾಗಿದ್ದಾರೆ.

ಸುಮಾರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಇವರು ತನ್ನ ಮನೆ ಮುಂದಿನ ಡಾಂಬರು ರಸ್ತೆ ಪಕ್ಕದ ಮಣ್ಣಿನ ರಸ್ತೆಯಲ್ಲಿ ತನ್ನ ಪತಿ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ರಿಕ್ಷಾ ಚಾಲಕ ನಿಯಂತ್ರಣ ತಪ್ಪಿ ಮಹಿಳೆಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ಅಪಘಾತದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟು ಗರ್ಭಿಣಿ ಮಹಿಳೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಪಟ್ಟಣದ ಲಕ್ಷೇಶ್ವರ – ಕುಂಬಾರಕೇರಿ ವ್ಯಾಪ್ತಿಯ ರಿಕ್ಷಾ ಚಾಲಕನಿಂದ ಅನಾಹುತ ನಡೆದಿದೆ ಎನ್ನಲಾಗಿದೆ.

ಘಟನೆ ಬಳಿಕ ರಿಕ್ಷಾ ಸಮೇತ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.