ಡೈಲಿ ವಾರ್ತೆ:13 ಏಪ್ರಿಲ್ 2023

ಉಡುಪಿ: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ – ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ವಿರುದ್ಧ ಪ್ರಕರಣ ದಾಖಲು

ಉಡುಪಿ: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಚಿತ ಮಾಹಿತಿ ಆಧಾರದ ಮೇಲೆ ಉಡುಪಿ ವಿಧಾನಸಭಾ ಕ್ಷೇತ್ರ ಫೈಯಿಂಗ್ ಸ್ಕ್ಯಾಡ್ ಟೀಮ್ ಅಧಿಕಾರಿಯಾಗಿರುವ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರೋಶನ್ ಕುಮಾರ್ ನೇತೃತ್ವ ತಂಡವು ಎ.12ರಂದು ಮಧ್ಯಾಹ್ನ ಉಡುಪಿ ಬ್ರಹ್ಮಗಿರಿ ನಾಯರ್‌ ರಸ್ತೆಯಲ್ಲಿರುವ ಕಾಂಗ್ರೆಸ್ ಭವನಕ್ಕೆ ದಾಳಿ ನಡೆಸಿದೆ.

ಈ ವೇಳೆ ಕಾಂಗ್ರೆಸ್ ಭವನದ ಎದುರು ಅಳವಡಿಸಿರುವ ಎರಡು ಪ್ಲಾಸ್ಟಿಕ್ ಪ್ಲೆಕ್ಸ್‌ಗಳಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ಬ್ಲಾಕ್ ಕಾಂಗ್ರೆಸ್ ಸಮಿತಿ, ಉಡುಪಿ-ಬ್ರಹ್ಮಾವರ ವತಿಯಿಂದ ‘ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್,’ ‘ಕಾಂಗ್ರೆಸ್ ಗ್ಯಾರಂಟಿ ಗೃಹಲಕ್ಷ್ಮಿ ಪ್ರತಿ ಯಜಮಾನಿಗೆ ಪ್ರತಿ ತಿಂಗಳು ರೂ 2,000’, ‘ಕಾಂಗ್ರೆಸ್ ಗ್ಯಾರಂಟಿ-3, ಅನ್ನಭಾಗ್ಯ ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ 10 K. G. ಅಕ್ಕಿ ಉಚಿತ’, ‘ಯುವನಿಧಿ ಪ್ರತಿ ತಿಂಗಳು ನಿರುದ್ಯೋಗ ಭತ್ತೆ ರೂ.3,000 ಪದವೀಧರರಿಗೆ, ರೂ.1500 ಡಿಪ್ಲೊಮಾ ಪದವೀಧರರಿಗೆ ” ಎಂಬುದಾಗಿ ನಮೂದಿರುವ ಹಾಗೂ ಪ್ಲೆಕ್ಸನ ಕೆಳಭಾಗದಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದ ಸಂಭಾವ್ಯ ಕಾಂಗ್ರೆಸ್‌ ಅಭ್ಯರ್ಥಿ ಎಂದು ಬಿಂಬಿತ ಪ್ರಸಾದ್‌ ರಾಜ್ ಕಾಂಚನ್‌ ಅವರ ಭಾವಚಿತ್ರವಿರುವ, ಪಕ್ಕದಲ್ಲಿ ಅಭಿವೃದ್ಧಿಗಾಗಿ ನಿಮ್ಮ ಮನೆ ಎಂಬುದಾಗಿ ನಮೂದಿರುವುದು ಕಂಡುಬಂದಿದೆ ಎನ್ನಲಾಗಿದೆ.