ಡೈಲಿ ವಾರ್ತೆ:13 ಏಪ್ರಿಲ್ 2023

ಮಣಿಪಾಲ:ಅಕ್ರಮವಾಗಿ ಸಾಗಿಸುತ್ತಿದ್ದ 3.92 ಲಕ್ಷ ರೂ. ಮೌಲ್ಯದ ಅಕ್ಕಿ ವಶಕ್ಕೆ

ಮಣಿಪಾಲ: ಸರಿಯಾದ ದಾಖಲೆ ಇಲ್ಲದೆ ಲಾರಿಯಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಅಕ್ಕಿಯನ್ನು ಸರ್ವೆಲೆನ್ಸ್ ತಂಡ ಅಲೆವೂರು ಚೆಕ್ ಪೋಸ್ಟ್‌ನಲ್ಲಿ ಎ.12ರಂದು ಸಂಜೆ ವೇಳೆ ವಶ ಪಡಿಸಿಕೊಂಡಿದೆ.

ಚುನಾವಣೆ ನಿಮಿತ್ತ ಅಲೆವೂರು ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಕೊರಂಗ್ರಪಾಡಿ ಕಡೆಯಿಂದ ಮಣಿಪಾಲ ಕಡೆಗೆ ಹೋಗುತ್ತಿದ್ದ ಈಚರ್ ಲಾರಿಯನ್ನು ತಡೆದು ಪರಿಶೀಲನೆ ನಡೆಸಲಾಯಿತು. ಈ ವೇಳೆ ಪೆರ್ಡೂರು ಕುಕ್ಕಿಕಟ್ಟೆ ಬೆಳ್ಳಂಪಳ್ಳಿಯಲ್ಲಿರುವ ಓಂ ಶಿವದುರ್ಗ ಇಂಡಸ್ಟ್ರೀಸ್‌ನ ಚಾಲಕ ಅಭಿಲಾಶ್ ಬಿಲ್‌ ನೊಂದಿಗೆ ಲಾರಿಯಲ್ಲಿ 50 ಅಕ್ಕಿ ತುಂಬಿರುವ ಗೋಣಿ ಚೀಲಗಳು ಒಟ್ಟು 9.80 ಕ್ವಿಂಟಾಲ್ ಅಕ್ಕಿಯನ್ನು ಸಾಗಿಸುತ್ತಿರುವುದು ಕಂಡು ಬಂದಿದೆ.

ಈ ಬಿಲ್‌ಗೂ ಮತ್ತು ಲಾರಿಯಲ್ಲಿದ್ದ ಅಕ್ಕಿಯ ಗೋಣಿ ಚೀಲಗಳಿಗೂ ಒಂದ ಕ್ಕೊಂದು ತಾಳೆಯಾಗದೇ ವ್ಯತ್ಯಾಸ ಕಂಡು ಬಂದಿರುವ ಹಿನ್ನೆಲೆಯಲ್ಲಿ ತಂಡ, 3,92,000 ರೂ. ಮೌಲ್ಯದ 9.80 ಕ್ವಿಂಟಾಲ್ ಅಕ್ಕಿ ಹಾಗೂ 5ಲಕ್ಷ ರೂ. ಮೌಲ್ಯದ ಲಾರಿಯನ್ನು ವಶಪಡಿಸಿಕೊಂಡಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.