ಡೈಲಿ ವಾರ್ತೆ:17 ಏಪ್ರಿಲ್ 2023

ಬಿಜೆಪಿ ತೊರೆದು ಕಾಂಗ್ರೆಸ್ ಕೈ ಹಿಡಿದ ಜಗದೀಶ್‌ ಶೆಟ್ಟರ್‌

ಬೆಂಗಳೂರು: ಸಾಕಷ್ಟು ರಾಜಕೀಯ ಹೈಡ್ರಾಮಾಗಳ ನಡುವೆ ಕೊನೆಗೂ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಇಂದು ಕಾಂಗ್ರೆಸ್‌ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ನಾಯಕರ ಸಮ್ಮುಖದಲ್ಲಿ ‘ಕೈ’ ಹಿಡಿದರು.

ಕೆಪಿಸಿಸಿ (KPCC) ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶೆಟ್ಟರ್‌ ಕಾಂಗ್ರೆಸ್‌ ಸೇರಿದರು. ಮಲ್ಲಿಕಾರ್ಜುನ ಖರ್ಗೆ ಅವರು ಶೆಟ್ಟರ್‌ಗೆ ಪಕ್ಷದ ಶಾಲು ಹೊದಿಸಿ, ಬಾವುಟ ನೀಡಿ ಪಕ್ಷಕ್ಕೆ ಸ್ವಾಗತಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಬಿಜೆಪಿ ಟಿಕೆಟ್‌ ನೀಡದ್ದಕ್ಕೆ ಶೆಟ್ಟರ್‌ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದರು. ಬಿಜೆಪಿ ಹಿರಿಯ ನಾಯಕರು ಮನವೊಲಿಸಲು ಎಷ್ಟೇ ಪ್ರಯತ್ನ ಮಾಡಿದರೂ ಹಠ ಬಿಡಲಿಲ್ಲ. ಕೊನೆಗೆ ಭಾನುವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ಬೆಂಗಳೂರಿಗೆ ಆಗಮಿಸಿದ್ದ ಶೆಟ್ಟರ್‌ರನ್ನು ಕಾಂಗ್ರೆಸ್‌ ನಾಯಕರು ತಡರಾತ್ರಿ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು. ಕಾಂಗ್ರೆಸ್‌ ಸೇರುವಂತೆ ಮನವೊಲಿಸಿದರು. ಈ ಎಲ್ಲಾ ಬೆಳವಣಿಗೆಯು ಶೆಟ್ಟರ್‌ ಕಾಂಗ್ರೆಸ್‌ ಸೇರುವುದು ಪಕ್ಕಾ ಎಂಬಂತಿತ್ತು.
ಸೋಮವಾರ ಬೆಳಗ್ಗೆ ಲಿಂಗಾಯತ ಸಮುದಾಯದ ನಾಯಕರೇ ಆಗ ಎಂ.ಬಿ.ಪಾಟೀಲ್‌ ಅವರು ಸ್ಕೈ ಗಾರ್ಡನ್‌ ಅಪಾರ್ಟ್‌ಮೆಂಟ್‌ಗೆ ತೆರಳಿ ಶೆಟ್ಟರ್‌ ಅವರನ್ನು ತಮ್ಮ ವಾಹನದಲ್ಲಿ ಕೆಪಿಸಿಸಿ ಕಚೇರಿಗೆ ಕರೆತಂದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಜಗದೀಶ್‌ ಶೆಟ್ಟರ್‌ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಈ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿ ಅನೇಕ ನಾಯಕರು ಉಪಸ್ಥಿತರಿದ್ದರು.