ಡೈಲಿ ವಾರ್ತೆ:17 ಏಪ್ರಿಲ್ 2023
ಬಿಜೆಪಿಯ ಅಣ್ಣಾಮಲೈ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಹಣದ ಗಂಟು ರವಾನೆ: ವಿನಯಕುಮಾರ್ ಸೊರಕೆ ಆರೋಪ
ಉಡುಪಿ: ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಇಂದು ಕಾಪುವಿಗೆ ಆಗಮಿಸಿರುವ ಹೆಲಿಕಾಪ್ಟರ್ ನಲ್ಲಿ ಹಣದ ಗಂಟು ರವಾನಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಮಾಜಿ ಸಚಿವ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಗಂಭೀರ ಆರೋಪ ಮಾಡಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಕಾಂಚನ್ ನಾಮಪತ್ರಿಕೆ ಸಲ್ಲಿಕೆಗೆ ಮುನ್ನ ಉಡುಪಿ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಳೆದ ಬಾರಿ ಸುಳ್ಳು ಪ್ರಚಾರದಿಂದ ಬಿಜೆಪಿ ಗೆಲುವು ಸಾಧಿಸಿದೆ. ಆದರೆ ಪ್ರತಿ ಬಾರಿಯೂ ಸುಳ್ಳು ನಡೆಯಲ್ಲ. ಉಡುಪಿ ಜಿಲ್ಲೆಯ ಮತದಾರರು ಪ್ರಭುದ್ಧರಾಗಿದ್ದಾರೆ. ಈ ದೇಶದ ಪ್ರಜಾಪ್ರಭುತ್ವ ಜಾತ್ಯತೀತತೆ ಉಳಿಸಲು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಅವರು ಹೇಳಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಾಂಚನ್ ಮಾತನಾಡಿ ಈ ಬಾರಿಯ ಚುನಾವಣೆ ನಮಗೆ ದೊಡ್ಡ ಸವಾಲಾಗಿದೆ. ಉಡುಪಿ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ ಎಂದಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಎ. ಗಫೂರ್, ದಿನಕರ್ ಹೇರೂರು, ಅಣ್ಣಯ್ಯ ಸೇರಿಗಾರ್, ಗೀತಾ ವಾಗ್ಳೆ, ವರೊನಿಕ ಕರ್ನೆಲಿಯೊ, ಪ್ರಖ್ಯಾತ್ ಶೆಟ್ಟಿ, ನಿತ್ಯಾನಂದ ಶೆಟ್ಟಿ ಮೊದಲಾದವರು ಉಪಸಿತರಿದ್ದರು.