ಡೈಲಿ ವಾರ್ತೆ:20 ಏಪ್ರಿಲ್ 2023
ಕೋಟತಟ್ಟು: ಅನ್ನಸಾಂಬಾರಿಗೆ ಗಾಜಿನ ಚೂರು ಹಾಕಿ ಸಂಬಂಧಿಕರ ಕೊಲೆಗೆ ಯತ್ನ – ಆರೋಪಿಯ ಬಂಧನ
ಕೋಟ:ಅನ್ನಸಾಂಬಾರಿಗೆ ಗಾಜಿನ ಚೂರುಗಳನ್ನು ಹಾಕಿ ಯುವಕನೋರ್ವ ಸಂಬಂಧಿಕರ ಕೊಲೆಗೆ ಯತ್ನಿಸಿದ ಘಟನೆ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೋಟತಟ್ಟು ಪಡುಕೆರೆ ನಿವಾಸಿ ವಿಜೇಂದ್ರ (28) ಬಂಧಿತ ಆರೋಪಿ.
ಮಾ.12ರಂದು ಗೀತಾ ಮನೆಯವರು ಊಟ ಮಾಡುವಾಗ ಅನ್ನದಲ್ಲಿ ಹಾಗೂ ಸಾಂಬಾರಿನಲ್ಲಿ ಗಾಜಿನ ಚೂರುಗಳು ಕಂಡು ಬಂದಿದ್ದವು. ಮಾ.15 ಮತ್ತು 18ರಂದು ರಾತ್ರಿ ಊಟ ಮಾಡುವಾಗ ಮತ್ತೆ ಅನ್ನದಲ್ಲಿ ಗಾಜಿನ ಚೂರುಗಳು ಸಿಕ್ಕಿದವು.ಈ ಮೂರೂ ದಿನವೂ ವಿಜೇಂದ್ರ ಗೀತಾ ಅವರ ಮೆನೆಗೆ ಬಂದಿದ್ದ ಎನ್ನಲಾಗಿದೆ.
ಈ ಬಗ್ಗೆ ವಿಜೇಂದ್ರ ಮೇಲೆ ಸಂಶಯಗೊಂಡ ಗೀತಾ ಮನೆಯವರು ಅಡುಗೆ ಮನೆಯಲ್ಲಿ ಮೊಬೈಲ್ ಕ್ಯಾಮೆರಾವನ್ನು ಅಡಗಿಸಿ ಇಟ್ಟು ರೆಕಾರ್ಡ್ ಮಾಡಿದ್ದರು.ವಿಜೇಂದ್ರ ಎ.17ರಂದು ಸಂಜೆ ಗೀತಾ ಅವರ ಮನೆಗೆ ಬಂದಿದ್ದು, ನೀರು ಕುಡಿಯುವ ನೆಪದಲ್ಲಿ ಅಡುಗೆ ಮನೆಗೆ ಹೋಗಿ ಸಾಂಬಾರಿಗೆ ಗಾಜಿನ ಚೂರುಗಳನ್ನು ಹಾಕಿದ್ದನು. ಈ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ