ಡೈಲಿ ವಾರ್ತೆ:20 ಏಪ್ರಿಲ್ 2023
ಕೋಟತಟ್ಟು ಗ್ರಾಮದಲ್ಲಿ ಹುಚ್ಚು ನಾಯಿ ಕಡಿತ – ಹಲವರು ಆಸ್ಪತ್ರೆಗೆ
ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆ, ಬಾರಿಕೆರೆ ಹಾಗೂ ಗೊಬ್ಬರಬೆಟ್ಟು ಪರಿಸರದಲ್ಲಿ ಗುರುವಾರ ಸಂಜೆ ಹುಚ್ಚು ನಾಯಿಯೊಂದು ದಾರಿಹೋಕರಿಗೆ ಮನಸೊಇಚ್ಛೆ ಕಚ್ಚಿ ಹಲವರು ಆಸ್ಪತ್ರೆ ಸೇರುವಂತಾಗಿದೆ. ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರು, ಮಕ್ಕಳು ಹಾಗೂ ಪುರುಷರು ಸೇರಿ ಆರು ಜನರ ಮೇಲೆ ನಾಯಿ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದೆ.
ಗಾಯಗೊಂಡವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರಿಸರದವರು ಸೇರಿ ಆ ನಾಯಿಯನ್ನು ಬೆನ್ನಟ್ಟಿ ಕೊಂದುಹಾಕಿದ್ದಾರೆ.
ಈ ಹುಚ್ಚು ನಾಯಿ ದಾರಿಯಲ್ಲಿ ಓಡಿ ಬರುತ್ತಾ ಹಲವು ನಾಯಿಗಳಿಗೂ ಕೂಡಾ ಕಚ್ಚಿದೆ ಎನ್ನಲಾಗಿದ್ದು, ಇದರಿಂದ ಅವುಗಳಿಗೂ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಭಯಪಡಲಾಗಿದೆ. ಸಂಬಂಧಿತ ಗ್ರಾಮ ಪಂಚಾಯತ್ ನವರು ಶೀಘ್ರ ಕಾರ್ಯಪ್ರವೃತ್ತರಾಗಿ ಹುಚ್ಚುನಾಯಿ ಕಡಿತಕ್ಕೊಳಗಾದ ನಾಯಿಗಳನ್ನು ಪತ್ತೆ ಮಾಡಿ, ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಾಕು ನಾಯಿಗಳನ್ನು, ದನಕರುಗಳನ್ನು ಹೊರಗೆ ಬಿಡದಂತೆ ವಿನಂತಿಸಲಾಗಿದೆ.