ಡೈಲಿ ವಾರ್ತೆ:22 ಏಪ್ರಿಲ್ 2023

ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ ಹಾಗೂ ಸಿಬ್ಬಂದಿ!

ದಾವಣಗೆರೆ : ದಾವಣಗೆರೆ ನಗರದಲ್ಲಿ ನಾಪತ್ತೆಯಾದ ಮಹಿಳೆಯನ್ನು ಹುಡುಕಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್ಐ ಮತ್ತು ಸಿಬ್ಬಂದಿ ಲೋಕಾಯುಕ್ತ ಪೊಲೀಸರ ಕೈಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಐ ಶಿವನಗೌಡ ಹಾಗೂ ಪಿಸಿ ಲಿಂಗರಾಜ್ ನಾಯ್ಕ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಇವರು ಮಹಿಳೆಯನ್ನು ಹುಡುಕಿ ಕೊಡಲು ಆಕೆಯ ಪತಿಗೆ ಪಿಎಸ್ಐ 50 ಸಾವಿರ ರೂ. ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಬಂದ ದೂರಿನ ಅನ್ವಯ ತನಿಖೆ ಪ್ರಾರಂಭಿಸಿದ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ರಾಷ್ಟ್ರಪತಿ ಹಾಗೂ ಅಂಜನೇಯ ಅವರು ಇಬ್ಬರನ್ನು ಬಂಧಿಸಿದ್ದಾರೆ.

ಚಿತ್ರದುರ್ಗ ಮೂಲದ ರಂಗಸ್ವಾಮಿ ಎಂಬವರ ಪತ್ನಿ ನಾಪತ್ತೆಯಾಗಿದ್ದು, ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ‌ನಾಪತ್ತೆ ಪ್ರಕಣ ದಾಖಲಾಗಿದೆ. ಈ ನಡುವೆ ಆಕೆ ದಾವಣಗೆರೆಯಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದುಬಂದ ಹಿನ್ನೆಲೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಆದರೆ ಠಾಣಾ ಪಿಎಸ್ಐ ಮತ್ತು ಶಿವನಗೌಡ ಹಾಗೂ ಪಿಸಿ ಲಿಂಗರಾಜ್ ನಾಯ್ಕ ಅವರು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.