ಡೈಲಿ ವಾರ್ತೆ: 03 ಮೇ 2023

ಬಂಟ್ವಾಳದಲ್ಲಿ ಬಿಜೆಪಿ ಸೋಲಿಸಿದರೆ ಮತೀಯ ರಾಜಕಾರಣದ ನಡು ಮುರಿದಂತೆ : ಸಿಪಿಐಎಂ ಮುಖಂಡ ಮುನೀರ್ ಕಾಟಿಪಳ್ಳ

ಬಂಟ್ವಾಳ : ಬಂಟ್ವಾಳದಲ್ಲಿ ಬಿಜೆಪಿಯನ್ನು ಸೋಲಿಸಿದರೆ ದಕ್ಷಿಣ ಕ‌ನ್ನಡ ಜಿಲ್ಲೆಯ ಕೋಮು ರಾಜಕಾರಣದ ನಡು ಮುರಿದಂತೆ, ಆಗ ಮಾತ್ರ ಶಿಕ್ಷಣ, ಉದ್ಯೋಗ, ಆರೋಗ್ಯದಂತಹ ಜನಸಾಮಾನ್ಯರ ಪ್ರಶ್ನೆಗಳು ಮುನ್ನಲೆಗೆ ಬರುತ್ತದೆ. ದುಡಿಯುವ ಜನರ ಹಕ್ಕುಗಳ ಕುರಿತು ಚರ್ಚೆ ಆರಂಭಗೊಳ್ಳುತ್ತದೆ. ಕಾರ್ಮಿಕ ವರ್ಗ ಆ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಮತ ಚಲಾಯಿಸಿ ಬಂಟ್ವಾಳದಲ್ಲಿ ಬಿಜೆಪಿಯನ್ನು ಸೋಲಿಸಲು ಮುಂದಾಗಬೇಕು ಎಂದು ಸಿಪಿಐಎಂ ಮುಖಂಡ ಮುನೀರ್ ಕಾಟಿಪಳ್ಳ ಹೇಳಿದರು.

ಅವರು ಬಂಟ್ವಾಳ ತಾಲೂಕು ಮಂಡಾಡಿಯಲ್ಲಿ ಸಿಪಿಐಎಂ ಸ್ಥಳೀಯ ಸಮಿತಿ ಆಯೋಜಿಸಿದ್ದ ಚು‌ನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಅತ್ಯಂತ ಹೆಚ್ಚು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡ ಬಂಟ್ವಾಳ ಕ್ಷೇತ್ರದಲ್ಲಿ ಕಳೆದ ಐದು ವರ್ಷದಲ್ಲಿ ಜನಸಾಮಾನ್ಯರ ಬದುಕಿಗೆ ಸಂಬಂಧಿಸಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ. ಸರಕಾರಿ ಶಾಲಾ ಕಾಲೇಜು, ಆಸ್ಪತ್ರೆ, ಉದ್ಯೋಗ ಸೃಷ್ಟಿಗೆ ಸಂಬಂಧಿಸಿ ಬಿಜೆಪಿ ಶಾಸಕರು ದಯನೀಯ ವೈಫಲ್ಯ ಕಂಡಿದ್ದಾರೆ. ಧರ್ಮಗಳ ನಡುವೆ ಎತ್ತಿಕಟ್ಟುವ ದ್ವೇಷದ ರಾಜಕಾರಣದಿಂದ ಗೆಲುವು ಸಾಧಿಸಿದರು ಬಿಜೆಪಿ ಶಾಸಕರು ಈಗಲೂ ಅದೇ ದಾರಿಯಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಇಂತಹ ಜನ ವಿರೋಧಿ ಬಿಜೆಪಿಯನ್ನು ಸೋಲಿಸುವುದು ಕಾರ್ಮಿಕ ವರ್ಗದ ಆದ್ಯತೆ ಎಂದು ಹೇಳಿದರು.

ಸಿಪಿಐಎಂ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಬಂಟ್ವಾಳ ತಾಲೂಕಿನ ಮುಗ್ಧ ಯುವಕರ ಮೆದುಳಿಗೆ ಧರ್ಮ ರಕ್ಷಣೆಯ ಅಮಲನ್ನು ಸೇರಿಸಿ ಧ್ವೇಷ ರಾಜಕಾರಣವನ್ನೇ ಸಾಧನೆ ಯನ್ನಾಗಿಸಿದ ಬಿಜೆಪಿ ಶಾಸಕರು ಕ್ಷೇತ್ರದ ಅಭಿವೃದ್ದಿಗೆ ಕಿಂಚಿತ್ತೂ ಗಮನ ನೀಡಿಲ್ಲ. ಆದರೆ ಗ್ರಾಮ ವಿಕಾಸ ಯಾತ್ರೆಯ ಮೂಲಕ ಸುಳ್ಳುಗಳ ಸರಮಾಲೆಯನ್ನು ಪೋಣಿಸಿ ಜನತೆಗೆ ಮಂಕು ಭೂದಿ ಎರಚಿದ್ದಾರೆ ಎಂದು ಆರೋಪಿಸಿದರು.

ಸಿಪಿಐಎಂ ಬಂಟ್ವಾಳ ತಾಲೂಕು ಮುಖಂಡರಾದ ಬಿ ಉದಯ ಕುಮಾರ್ ಅಧ್ಯಕ್ಷತೆ ವಹಿದ್ದರು.

ವೇದಿಕೆಯಲ್ಲಿ ಕಾರ್ಮಿಕ ಮುಖಂಡರಾದ ಗಿರಿಜಾ, ಕುಶಲ, ಯುವಜನ ನಾಯಕರಾದ ಸುರೇಂದ್ರ ಕೋಟ್ಯಾನ್, ಜಯಶೀಲ ಉಸ್ಥಿತರಿದ್ದರು.