ಡೈಲಿ ವಾರ್ತೆ: 03 ಮೇ 2023

ಕನ್ನಡ ಅಮೃತವರ್ಷಿಣಿ ಖ್ಯಾತಿಯ ನಟ ಶರತ್ ಬಾಬು ನಿಧನ

ಕನ್ನಡದ ಅಮೃತವರ್ಷಿಣಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟ ಶರತ್ ಬಾಬು ಇಂದು (ಮೇ 3) ರಂದು ಹೈದರಾಬಾದ್ನಲ್ಲಿ ಕೊನೆ ಉಸಿರೆಳೆದಿದ್ದಾರೆ.

ಅವರಿಗೆ 71 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆಗೆ ಸ್ಪಂದಿಸದೆ ಇಂದು ನಿಧನ ಹೊಂದಿದ್ದಾರೆ.

ಶರತ್ ಬಾಬು ಅವರನ್ನು ಏಪ್ರಿಲ್ನ ಮೊದಲ ವಾರದಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ತುಸು ಚೇತರಿಸಿಕೊಂಡ ಬಳಿಕ ಅವರನ್ನು ಹೈದರಾಬಾದ್ಗೆ ಕರೆದೊಯ್ಯಲಾಗಿತ್ತು. ಅದಾದ ಬಳಿಕ ಅಲ್ಲಿ ಮತ್ತೆ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಏಪ್ರಿಲ್ 20 ರ ಸುಮಾರಿಗೆ ಹೈದರಾಬಾದ್ನ ಗಚ್ಚಿಬೌಲಿಯ ಎಐಜಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಐಸಿಯು ವಾರ್ಡ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ವೈದ್ಯರ ಸತತ ಪ್ರಯತ್ನಗಳು ಫಲನೀಡದೆ ಶರತ್ ಬಾಬು ಇಹಲೋಕ ತ್ಯಜಿಸಿದ್ದಾರೆ.

1973 ರಲ್ಲಿ ಚಿತ್ರರಂಗ ಪ್ರವೇಶಿಸಿದ ಶರತ್ ಬಾಬು ತೆಲುಗು, ತಮಿಳು ಚಿತ್ರರಂಗದಲ್ಲಿ ಬಹು ಜನಪ್ರಿಯ ನಟರಾಗಿದ್ದವರು. ಸಿನಿಮಾ ನಾಯಕನಾಗಿ, ಎರಡನೇ ನಾಯಕನಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ಸಮಯದಲ್ಲಿ ಸ್ಟಾರ್ ಆಗಿ ಸಹ ಮೆರೆದಿದ್ದಾರೆ. ರಜನೀಕಾಂತ್ ಜೊತೆಗೆ ಮುತ್ತು, ಅರುಣಾಚಲಂ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಶರತ್ ಬಾಬು ನಟಿಸಿದ್ದಾರೆ. ತಮ್ಮ 40 ವರ್ಷದ ಸಿನಿ ಬದುಕಿನಲ್ಲಿ ಸುಮಾರು 200 ಕ್ಕೂ ಹೆಚ್ಚು ಪಾತ್ರಗಳಲ್ಲಿ ಶರತ್ ಬಾಬು ನಟಿಸಿದ್ದಾರೆ.

ಕನ್ನಡದ ಹಲವು ಸಿನಿಮಾಗಳಲ್ಲಿ ಶರತ್ ಬಾಬು ನಟಿಸಿದ್ದಾರೆ. ತುಳಸಿದಳ, ರಣಚಂಡಿ, ಶಕ್ತಿ, ಕಂಪನ, ಗಾಯ, ಹೃದಯ-ಹೃದಯ, ನೀಲ, ನಮ್ಮೆಜಮಾನ್ರು, ಅಮೃತವರ್ಷಿಣಿ ಸಿನಿಮಾದಲ್ಲಿ ಪಾತ್ರವನ್ನು ಕನ್ನಡ ಸಿನಿಮಾ ಪ್ರೇಮಿಗಳು ಮರೆಯುವಂತಿಲ್ಲ. ಕನ್ನಡದ ಪ್ರೀತಿಗಾಗಿ ಧಾರಾವಾಹಿಯಲ್ಲಿಯೂ ಶರತ್ ಬಾಬು ನಟಿಸಿದ್ದಾರೆ. ತೆಲುಗು, ತಮಿಳಿನಲ್ಲಿ ಚಿರಂಜೀವಿ, ಕಮಲ್ ಹಾಸನ್ ಇನ್ನೂ ಹಲವು ಮೇರು ಕಲಾವಿದರೊಟ್ಟಿಗೆ ಶರತ್ ಬಾಬು ನಟಿಸಿದ್ದಾರೆ.

ಇತ್ತೀಚೆಗೆ ಚಿತ್ರರಂಗದಿಂದ ತುಸು ಅಂತರ ಕಾಯ್ದುಕೊಂಡಿದ್ದ ಶರತ್ ಬಾಬು, ಕೊನೆಯದಾಗಿ ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಪತ್ರಕರ್ತೆಯೊಬ್ಬರನ್ನು ಅವರು ವಿವಾಹವಾಗಿದ್ದರು ಎಂಬ ಸುದ್ದಿಯೂ ಇದೆ.