ಡೈಲಿ ವಾರ್ತೆ: 04 ಮೇ 2023

ತೆಕ್ಕಟ್ಟೆ ಮ‌ನೆಯಿಂದಲೇ ಮತದಾನ ಮಾಡಿದ್ದ ವ್ಯಕ್ತಿ ಫಲಿತಾಂಶ ಬರುವ ಮೊದಲೇ ಮೃತ್ಯು

ಕುಂದಾಪುರ: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮನೆಯಿಂದಲೇ ಮತದಾನ ಮಾಡಿದ್ದ ವ್ಯಕ್ತಿ ಫಲಿತಾಂಶ ಬರುವ ಮೊದಲೇ ಮೃತಪಟ್ಟಿರುವ ಘಟನೆ ತೆಕ್ಕಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದಿದೆ.

ನಿವೃತ್ತ ಶಿಕ್ಷಕ ಮಾಲಾಡಿ ಗುರುರಾಜ ಭಟ್‌ (94) ಅವರು ಎ.30 ರಂದು ಮನೆಯಿಂದಲೇ ತಮ್ಮ ಹಕ್ಕನ್ನು ಚಲಾಯಿಸಿದ್ದು, ಮೇ 3 ರಂದು ಅಸೌಖ್ಯದಿಂದ ನಿಧನ ಹೊಂದಿದ್ದಾರೆ.

ಇವರ ಮಕ್ಕಳೆಲ್ಲ ಹೊರ ಜಿಲ್ಲೆಗಳಲ್ಲಿ ಉದ್ಯೋಗದಲ್ಲಿರುವ ಹಿನ್ನೆಲೆಯಲ್ಲಿ ಮತಗಟ್ಟೆಯೆಡೆಗೆ ಬಂದು ಮತ ಚಲಾಯಿಸಲು ಕಷ್ಟಸಾಧ್ಯವಾದ ಪರಿಣಾಮ ಮನೆಯಿಂದಲೇ ಮತದಾನ ಮಾಡುವುದಾಗಿ ನೋಂದಾಯಿಸಿಕೊಂಡಿದ್ದರು. ಅದರಂತೆ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬಂದಿಗಳು ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದರು.

ತಮ್ಮ ಹಕ್ಕು ಚಲಾಯಿಸಿದ್ದ ಎರಡೇ ದಿನಕ್ಕೆ ಮಾಲಾಡಿ ಗುರುರಾಜ ಭಟ್‌ ಅವರು ಫಲಿತಾಂಶ ಬರುವ ಮೊದಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.