ಡೈಲಿ ವಾರ್ತೆ:07 ಮೇ 2023
ರಾಜರಾಜೇಶ್ವರಿನಗರದಲ್ಲಿ ಮತಯಾಚನೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ: ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ ತಳ್ಳಾಡಿದ ಡಿಸಿಪಿ
ಬೆಂಗಳೂರು:ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಮತಯಾಚನೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಗಿದ್ದು, ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾರನ್ನು ಡಿಸಿಪಿ ತಳ್ಳಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕುಸುಮಾರನ್ನು ಡಿಸಿಪಿ ತಳ್ಳಿದ್ದಾರೆಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪ ಮಾಡಿದ್ದು, ಯಶವಂತಪುರ ಠಾಣೆ ಎದುರು ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ.
ಪೊಲೀಸರು ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿ ಧರಣಿ ನಡೆಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ತೆರಳಿ ಚೀಟಿ ಹಂಚಿಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ವೇಳೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಲಾಠಿ ಬೀಸಿದ್ದರು.
ಘಟನೆ ಕುರಿತಾಗಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಕಾರ್ಯಕರ್ತರು ಅಟ್ಟಾಡಿಸಿ ಹೊಡೆಯುತ್ತಿದ್ದಾರೆಂದು ನಮ್ಮ ಕಾರ್ಯಕರ್ತರು ನನಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಪೊಲೀಸರೆದುರೇ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾರೆಂದು ಹೇಳಿದ್ದರು.
ತಕ್ಷಣ ನಾನು ಸ್ಥಳಕ್ಕೆ ಬಂದಾಗ ಪೊಲೀಸರು ಸುಮ್ಮನೆ ನಿಂತಿದ್ದರು.
ಬಿಜೆಪಿ ಕಾರ್ಯಕರ್ತರು ಹೊಡೆಯುತ್ತಿದ್ದನ್ನು ಕಂಡು ನಗುತ್ತಿದ್ದರು. ಹಲ್ಲೆ ತಡೆಯದ ಪೊಲೀಸರನ್ನು ಪ್ರಶ್ನಿಸಿದರೆ ಏನೂ ಆಗಿಲ್ಲ ಅಂತಾರೆ. ಮೇಲಿಂದ ನೀರು ಸುರಿಯುತ್ತಿದ್ದಾರೆ. ಒಬ್ಬ ಅಭ್ಯರ್ಥಿಗೆ ರಕ್ಷಣೆ ಇಲ್ಲವೆಂದು ವ್ಯವಸ್ಥೆ ಜೀವಂತವಿದೆಯಾ ಎಂದು ಪ್ರಶ್ನಿಸಿದ್ದಾರೆ.
ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ರೌಡಿಶೀಟರ್ಗಳು ಸಕ್ರಿಯವಾಗಿದ್ದಾರೆ. ಪೊಲೀಸರು ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಮುಕ್ತ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಆಗದಿದ್ದರೆ ರಾಜರಾಜೇಶ್ವರಿನಗರದಲ್ಲಿ BJP ಅಭ್ಯರ್ಥಿ ಗೆದ್ದಿದ್ದಾರೆಂದು ಘೋಷಿಸಿಬಿಡಿ. ತಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಸಂಬಂಧ ದೂರು ದಾಖಲಿಸಿದ್ದೇವೆ ಎಂದು ಹೇಳಿದರು.
ಘಟನೆಯ ಬಳಿಕ ಯಶವಂತಪುರ ಪೊಲೀಸ್ ಠಾಣಾ ಮುಂಭಾಗ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಠಾಣೆಯ ಮುಂದೆ ಕೆಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.