

ಡೈಲಿ ವಾರ್ತೆ: ಫೆ./18/2026
ಸಿವಿಲ್ ಜಡ್ಜ್ ನೇಮಕಾತಿಯಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್: 25ನೇ ವಯಸ್ಸಿನಲ್ಲೇ ಶಿರಸಿ ಹೆಗಡೆಕಟ್ಟಾದ ಸುಮಂತ್ ನಾಯ್ಕ್ ನ್ಯಾಯಾಧೀಶರಾಗಿ ಆಯ್ಕೆ

ಉತ್ತರ ಕನ್ನಡ: ಸಿವಿಲ್ ಜಡ್ಜ್ ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 2ನೇ ರ‍್ಯಾಂಕ್ ಪಡೆಯುವ ಮೂಲಕ ಶಿರಸಿ ತಾಲೂಕಿನ ಹೆಗಡೆಕಟ್ಟಾದ ಸುಮಂತ್ ಮಂಜುನಾಥ್ ನಾಯ್ಕ್ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ನಡೆದ ಅಂತಿಮ ಲಿಖಿತ ಪರೀಕ್ಷೆಯ ಬಳಿಕ ಜನವರಿಯಲ್ಲಿ ಸಂದರ್ಶನ ಪ್ರಕ್ರಿಯೆ ನಡೆಯಿತು. ಇದೀಗ ಕರ್ನಾಟಕ ಹೈಕೋರ್ಟ್ 83 ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ ಸುಮಂತ್ ನಾಯ್ಕ್ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಸುಮಂತ್ ಅವರು ಬೆಂಗಳೂರು ಲೋಕಾಯುಕ್ತದ ಸರ್ಕಾರಿ ಅಭಿಯೋಜಕರಾದ ಮಂಜುನಾಥ್ ನಾಯ್ಕ್ ಹಾಗೂ ವಕೀಲೆ ಸುಜಾತಾ ನಾಯ್ಕ್ ದಂಪತಿಯ ಪುತ್ರರು. ಶೈಕ್ಷಣಿಕ ಕ್ಷೇತ್ರದಲ್ಲಿ ಸದಾ ಮೇಲುಗೈ ಸಾಧಿಸಿರುವ ಅವರು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಚುರುಕುತನ ತೋರಿದ್ದು, ಹಲವು ವೇದಿಕೆಗಳಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ.
ಮೊದಲ ಪ್ರಯತ್ನದಲ್ಲೇ ಇಂತಹ ಸಾಧನೆ ಮಾಡಿರುವುದು ಕುಟುಂಬಸ್ಥರು, ಸ್ನೇಹಿತರು ಹಾಗೂ ತಾಲೂಕಿನ ಜನರಲ್ಲಿ ಹರ್ಷದ ಅಲೆ ಮೂಡಿಸಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಕನಸು ಸಾಕಾರಗೊಂಡ ಹಿನ್ನೆಲೆಯಲ್ಲಿ ಸುಮಂತ್ ಅವರ ಸಾಧನೆಗೆ ವಿವಿಧ ವಲಯಗಳಿಂದ ಅಭಿನಂದನೆಗಳ ಸುರಿಮಳೆ ಹರಿದು ಬರುತ್ತಿದೆ.