ಡೈಲಿ ವಾರ್ತೆ: ಫೆ./18/2026

ಚಿಕ್ಕೋಡಿ| ಭೀಕರ ರಸ್ತೆ ದುರಂತ: ಲಾರಿ, ಬೈಕ್ ಮುಖಾಮುಖಿ ಡಿಕ್ಕಿ – ಒಂದೇr ಕುಟುಂಬದ ಮೂವರು ಸ್ಥಳದಲ್ಲೇ ಸಾವು

ಚಿಕ್ಕೋಡಿ: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ದುರ್ಘಟನೆ ಚಿಕ್ಕೋಡಿ ಉಪವಿಭಾಗದ ಅಳಖನೂರ ಗ್ರಾಮ ಹೊರವಲಯದಲ್ಲಿ ಸಂಭವಿಸಿದೆ.

ಮೃತರನ್ನು ಗಿರೇಪ್ಪಾ ಕುಂದರಾಳಿ (38), ಪತ್ನಿ ಮಂಜುಳಾ ಕುದ್ರಾಳಿ (28) ಹಾಗೂ ಮಗಳು ಆರಾಧ್ಯಾ (7) ಎಂದು ಗುರುತಿಸಲಾಗಿದೆ.

ಗಿರೇಪ್ಪಾ ಅವರು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಸಿಂಗಪುರ್ ಪಟ್ಟಣದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಕುಟುಂಬದ ಮೂವರು ಬೈಕ್‌ನಲ್ಲಿ ಜಯಸಿಂಗಪುರದಿಂದ ಬಾಗಲಕೋಟ ಜಿಲ್ಲೆಯ ಜಮಖಂಡಿ ಪಟ್ಟಣದತ್ತ ಪ್ರಯಾಣಿಸುತ್ತಿದ್ದರು. ಈ ವೇಳೆ ಜಮಖಂಡಿ–ಮೀರಜ ರಾಜ್ಯ ಹೆದ್ದಾರಿಯ ಅಲಖನೂರ ಗ್ರಾಮ ಹೊರವಲಯದಲ್ಲಿ ಎದುರಿಗೆ ಬಂದ ಲಾರಿ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣವನ್ನು ಹಾರುಗೇರಿ ಪೊಲೀಸ್ ಸ್ಟೇಷನ್ ನಲ್ಲಿ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.