

ಡೈಲಿ ವಾರ್ತೆ: ಫೆ./18/2026
ಮಂಡ್ಯದಲ್ಲಿ ‘ಆ್ಯಸಿಡ್ ಅಟ್ಯಾಕ್’ ದರೋಡೆ ನಾಟಕ: ಚಿನ್ನದಂಗಡಿ ಮಾಲೀಕನೇ ಮಾಸ್ಟರ್ ಮೈಂಡ್!

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದ ಆ್ಯಸಿಡ್ ದಾಳಿ ಮತ್ತು ದರೋಡೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪ್ರಕರಣದ ಸೂತ್ರಧಾರನೇ ಚಿನ್ನದಂಗಡಿ ಮಾಲೀಕನಾಗಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ರಾಜಸ್ಥಾನ ಮೂಲದ ಜಿತೇಂದ್ರ ಸಿಂಗ್ ಎಂಬಾತ ಕ್ಯಾತನಹಳ್ಳಿಯಲ್ಲಿ “ಮಹಾಲಕ್ಷ್ಮಿ ಜುವೆಲರಿ” ಎಂಬ ಚಿನ್ನದ ಅಂಗಡಿ ನಡೆಸುತ್ತಿದ್ದ. ಕೆಲ ದಿನಗಳ ಹಿಂದೆ ತನ್ನ ಅಂಗಡಿಗೆ ದುಷ್ಕರ್ಮಿಗಳು ನುಗ್ಗಿ ಮುಖಕ್ಕೆ ಆ್ಯಸಿಡ್ ಎರಚಿ, ಅಂಗಡಿಯಲ್ಲಿದ್ದ ಸುಮಾರು 170 ಗ್ರಾಂ ಚಿನ್ನ ಹಾಗೂ 8 ಕೆಜಿ ಬೆಳ್ಳಿಯನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ಆತ ಪೊಲೀಸರಿಗೆ ದೂರು ನೀಡಿದ್ದ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಕೆಲವು ಅನುಮಾನಾಸ್ಪದ ಸಂಗತಿಗಳು ಗೋಚರಿಸಿವೆ. ಅಂಗಡಿಯಲ್ಲಿದ್ದ ಸಿಸಿಟಿವಿ ಡಿವಿಆರ್ ನಾಪತ್ತೆಯಾಗಿರುವುದು ಮತ್ತು ಯಾವುದೇ ಸ್ಪಷ್ಟ ಸಾಕ್ಷ್ಯ ಸಿಗದಿರುವುದು ತನಿಖೆಯನ್ನು ಗೊಂದಲಕ್ಕೀಡಾಗಿಸಿತ್ತು.
ಆದರೆ ಜಿತೇಂದ್ರನ ಮುಖದ ಗಾಯದ ಸ್ವರೂಪ ಪೊಲೀಸರಲ್ಲಿ ಅನುಮಾನ ಹುಟ್ಟಿಸಿತು. ಆ್ಯಸಿಡ್ ದಾಳಿಯಲ್ಲಿ ಸಾಮಾನ್ಯವಾಗಿ ಕಣ್ಣು ಸೇರಿದಂತೆ ಮುಖದ ಭಾಗಗಳಿಗೆ ಗಂಭೀರ ಹಾನಿಯಾಗುತ್ತದೆ. ಆದರೆ ಇಲ್ಲಿ ಮುಖಕ್ಕೆ ರಾಸಾಯನಿಕ ಲೇಪನ ಮಾಡಿದಂತೆ ಕಾಣಿಸಿದ್ದು ತನಿಖೆಗೆ ಹೊಸ ದಿಕ್ಕು ನೀಡಿತು.
ಮುಂದಿನ ಪರಿಶೀಲನೆಯಲ್ಲಿ ನಾಪತ್ತೆಯಾಗಿದ್ದ ಸಿಸಿಟಿವಿ ಡಿವಿಆರ್ ಸಮೀಪದ ಕೆರೆಯಲ್ಲಿ ಪತ್ತೆಯಾಯಿತು. ಇದಾದ ಬಳಿಕ ಜಿತೇಂದ್ರನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಅಚ್ಚರಿಯ ಸತ್ಯ ಬಹಿರಂಗವಾಯಿತು.
ಚಿನ್ನ ಖರೀದಿಗಾಗಿ ಮೈಸೂರಿನಲ್ಲಿ ಸಾಲ ಪಡೆದಿದ್ದ ಜಿತೇಂದ್ರ, ಕೆಲವರ ಬಳಿ ಒಡವೆಗಳನ್ನು ಅಡವಿಟ್ಟುಕೊಂಡಿದ್ದನು. ಸಾಲದ ಒತ್ತಡದಿಂದ ಪಾರಾಗಲು ಮತ್ತು ಹಣಕಾಸು ವ್ಯವಹಾರಗಳಿಂದ ತಪ್ಪಿಸಿಕೊಳ್ಳಲು ಆತ ದರೋಡೆ ನಾಟಕವಾಡಿದ್ದಾನೆ ಎನ್ನಲಾಗಿದೆ. ತನ್ನ ಮುಖಕ್ಕೆ ಚಿನ್ನಕ್ಕೆ ಬಳಸುವ ರಾಸಾಯನಿಕವನ್ನು ಬಳಿದುಕೊಂಡು ಆ್ಯಸಿಡ್ ದಾಳಿ ನಡೆದಂತೆ ನಾಟಕವಾಡಿ, ಅಂಗಡಿಯ ಚಿನ್ನ-ಬೆಳ್ಳಿಯನ್ನು ಸ್ನೇಹಿತನ ಬಳಿ ಅಡಗಿಸಿದ್ದಾನೆ. ಬಳಿಕ ರಾಜಸ್ಥಾನಕ್ಕೆ ಪರಾರಿಯಾಗುವ ಯೋಜನೆಯನ್ನೂ ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಚಾಣಾಕ್ಷ ತನಿಖೆಯಿಂದ ಈ ನಾಟಕ ಬಯಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ವಿಚಾರಣೆ ಮುಂದುವರಿದಿದೆ.
ಸಾಮಾನ್ಯ ಜನರನ್ನು ಹಾಗೂ ಸಾಲಕೊಟ್ಟವರನ್ನು ಯಾಮಾರಿಸಲು ರೂಪಿಸಿದ ಈ ‘ಆ್ಯಸಿಡ್ ಕಮ್ ದರೋಡೆ’ ಕಥೆ ಇದೀಗ ಕಾನೂನು ಕೈಗೆ ಸಿಕ್ಕಿದೆ. ಪೊಲೀಸರು ಈ ಪ್ರಕರಣದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಾರೆ.