

ಡೈಲಿ ವಾರ್ತೆ: ಫೆ./18/2026
ಅನಾರೋಗ್ಯ ಕಾಡಿದ ನೋವು: ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ನಿವೃತ್ತ ಇಸ್ರೋ ಉದ್ಯೋಗಿ

ಬೆಂಗಳೂರು, ಫೆ.18: ನಿವೃತ್ತ ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗಾನಿಸಷನ್ (ಇಸ್ರೋ) ಉದ್ಯೋಗಿಯೊಬ್ಬರು ಪತ್ನಿಯನ್ನು ಕೊಲೆ ಮಾಡಿ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ಬೆಂಗಳೂರು ಹೊರವಲಯದ ಅವಲಹಳ್ಳಿ ಸಮೀಪದ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಇಂದು ಬೆಳಗ್ಗೆ ನಡೆದಿದೆ.
ನಾಗೇಶ್ವರ್ ರಾವ್ (75) ಅವರು ತಮ್ಮ ಪತ್ನಿ ಸಂಧ್ಯಾ (65) ಅವರ ಕತ್ತು ಟವಲ್‌ನಿಂದ ಬಿಗಿದು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ.
ದಂಪತಿ ಕಳೆದ ಮೂರು ವರ್ಷಗಳಿಂದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು.
ಮೂಲಗಳ ಪ್ರಕಾರ, ನಾಗೇಶ್ವರ್ ರಾವ್ ಅವರು ಕೆಲಕಾಲದಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ತಾವು ಆತ್ಮಹತ್ಯೆ ಮಾಡಿಕೊಂಡರೆ ಪತ್ನಿ ಒಂಟಿಯಾಗಿಬಿಡುತ್ತಾಳೆ ಹಾಗೂ ಆಕೆಯನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ ಎಂಬ ಆತಂಕದಿಂದ ಈ ದುರ್ಘಟನೆಯನ್ನು ರೂಪಿಸಿಕೊಂಡಿದ್ದರೆಂದು ತಿಳಿದುಬಂದಿದೆ.
ಯೋಜನೆಯಂತೆ ಇಂದು ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಟವಲ್‌ನಿಂದ ಪತ್ನಿಯ ಕತ್ತು ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ತಾವು ಆತ್ಮಹತ್ಯೆಗೆ ಯತ್ನಿಸಿದರೂ ಧೈರ್ಯ ಸಾಲದೇ ಕಿರುಚಿಕೊಂಡು ಹೊರಗೆ ಬಂದಿದ್ದಾರೆ. ಕಿರುಚಾಟ ಕೇಳಿ ಅಕ್ಕಪಕ್ಕದ ನಿವಾಸಿಗಳು ಮನೆಗೆ ಧಾವಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಈಸ್ಟ್ ಪಾಯಿಂಟ್ ಕಾಲೇಜಿಗೆ ರವಾನಿಸಲಾಗಿದೆ. ದಂಪತಿಯ ಪುತ್ರಿ ವಿದೇಶದಲ್ಲಿದ್ದು, ಆಕೆಗೆ ಮಾಹಿತಿ ನೀಡಲಾಗಿದೆ.
ಅವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಗೇಶ್ವರ್ ರಾವ್ ಅವರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸುತ್ತಿದ್ದಾರೆ.