ಡೈಲಿ ವಾರ್ತೆ:07 ಮೇ 2023

ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಣೇಶ್ ಪೂಜಾರಿ ಚಿಕಿತ್ಸೆಗೆ 17 ಲಕ್ಷ ರೂ. ನೀಡಿ ಮಾನವೀಯತೆ ಮೆರೆದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ

ಮಂಗಳೂರು: ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಮಾನವೀಯತೆ ಮೆರೆದ ಸಂದರ್ಭವೊಂದು ಕ್ಷೇತ್ರದಲ್ಲಿ ಕಂಡುಬಂದಿದೆ. ಗಣೇಶ್ ಪೂಜಾರಿ ಎನ್ನುವವರು ರಸ್ತೆ ಅಪಘಾತಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ 45 ದಿನ ಕೋಮಾದಲ್ಲಿದ್ದರು. ಇಂತಹ ಸಂಕಷ್ಟಕ್ಕೆ ಒಳಗಾಗಿದ್ದ ಯುವಕನೋರ್ವನ ಕುಟುಂಬಕ್ಕೆ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.

ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಣೇಶ್ ಪೂಜಾರಿ ಅವರ ಆಸ್ಪತ್ರೆ ಬಿಲ್ ಒಟ್ಟು 24 ಲಕ್ಷ ರೂಪಾಯಿ ಆಗಿತ್ತು. ಇಷ್ಟು ದೊಡ್ಡ ಮೊತ್ತದ ಬಿಲ್ ಕಟ್ಟಲಾಗದೆ ಗಾಯಾಳು ಕುಟುಂಬಸ್ಥರು ಕಂಗಾಲಾಗಿದ್ದರು. ಈ ಬಗ್ಗೆ ಸಹಕಾರ ನೀಡುವಂತೆ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಬಳಿ ಗಣೇಶ್ ಪೋಷಕರು ಅಂಗಲಾಚಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ಈ ವಿಷಯ ತಿಳಿದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಖಾಸಗಿ ಆಸ್ಪತ್ರೆಯ 17 ಲಕ್ಷ ರೂಪಾಯಿ ಬೀಲ್ ಪಾವತಿಸಿ ಗಣೇಶ್ ಕುಟುಂಬಕ್ಕೆ ನೆರವಾಗಿದ್ದಾರೆ.

ಇನಾಯತ್ ಅಲಿಯವರು ದೇವರಾಗಿ ಬಂದು ಮಗನನ್ನು ಉಳಿಸಿಕೊಟ್ಟಿದ್ದಾರೆ. ಮಗನನ್ನು ಐಸಿಯುವಿನಿಂದ ಹೊರತರಲಾಗಿದೆ. ಬೆಳಗ್ಗೆ, ಸಂಜೆ, ರಾತ್ರಿ 12 ಗಂಟೆಗೆಲ್ಲ ಬಂದು ಆಸ್ಪತ್ರೆಯಲ್ಲಿ ನೋಡಿಕೊಂಡಿದ್ದಾರೆ. ನಮಗೆ ಸ್ವತಹ ಅವರೇ ಫೋನ್ ಮಾಡಿ ಕೇಳಿ ಚೆನ್ನಾಗಿದ್ದಾರಾ ಎಂದು ಕೇಳುತ್ತಿದ್ದರು. ಅವರು ಒಳ್ಳೆ ಜನ ಎಂದು ಗಾಯಾಳುವಿನ ಪೋಷಕರು ಹೇಳಿದ್ದಾರೆ.
ಇನಾಯತ್ ಅಲಿಯಂತಹವರು ಕ್ಷೇತ್ರಕ್ಕೆ ಬೇಕು. ನಾನು ಗಾಯಗೊಂಡು ಆಸ್ಪತ್ರೆಯಲ್ಲಿದ್ರೆ 17 ಲಕ್ಷದವರೆಗೆ ಬಿಲ್ ಕಟ್ಟಿದ್ದಾರೆ. ತಿಂಗಳಿಗೆ ಟೆಸ್ಟ್ಗೆ ಹೋಗಬೇಕಾದರೆ 6 ಸಾವಿರ ರೂ.ಬೇಕಾಗಿತ್ತು. ಇದನ್ನೆಲ್ಲ ಅವರೇ ನೋಡಿಕೊಂಡಿದ್ದಾರೆ. ಏನೇ ಆದರೂ ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು ಎಂದು ಗಾಯಾಳು ಯುವಕ ಹೇಳಿದ್ದಾರೆ‌.