ಡೈಲಿ ವಾರ್ತೆ: ಫೆ./18/2026

ಎಟಿಎಂ ಹಣ ಸಾಗಿಸುವ ವ್ಯಾನ್ ಪಲ್ಟಿ: ಬ್ಯಾಂಕ್ ಸಿಬ್ಬಂದಿ ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ

ಪಾವಗಡ: ಎಟಿಎಂಗೆ ಹಣ ಸಾಗಿಸುತ್ತಿದ್ದ ವ್ಯಾನ್ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದ ಘಟನೆ ಪಾವಗಡ ತಾಲೂಕಿನ ದೊಮ್ಮತುಮರಿ ಬಳಿ ನಡೆದಿದೆ.

ದುರ್ಘಟನೆಯಲ್ಲಿ ಬ್ಯಾಂಕ್ ಸಿಬ್ಬಂದಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ.
ಮೃತರನ್ನು ಚಂದನ್ ಎಂದು ಗುರುತಿಸಲಾಗಿದೆ.

ದೊಮ್ಮತುಮರಿ ಗ್ರಾಮದ ಎಟಿಎಂನಲ್ಲಿ ಹಣ ಡೆಪಾಸಿಟ್ ಮಾಡಿ ಹಿಂತಿರುಗುತ್ತಿದ್ದ ವೇಳೆ ವ್ಯಾನ್ ಅಪಘಾತಕ್ಕೀಡಾಗಿದೆ. ಮುರಾರಾಯನಪಳ್ಳಿ ಕೆರೆಯ ಕಟ್ಟೆ ತಿರುವಿನಲ್ಲಿ ಎದುರುಗಡೆಯಿಂದ ಬರುತ್ತಿದ್ದ ವಾಹನವನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ವ್ಯಾನ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.

ಅಪಘಾತದ ಪರಿಣಾಮವಾಗಿ ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರಲ್ಲಿ ಓರ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಾಳುಗಳ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಘಟನೆ ತಿಳಿದು ಪಾವಗಡ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.