ಡೈಲಿ ವಾರ್ತೆ: ಫೆ./18/2026

ಉಡುಪಿ| ಫೇಸ್‌ಬುಕ್ ಸ್ನೇಹದ ಬಲೆಗೆ ಬಿದ್ದ ಮಹಿಳೆ; ‘ಪಾರ್ಸೆಲ್, ಡಾಲರ್’ ನೆಪದಲ್ಲಿ ₹7.10 ಲಕ್ಷ ಸೈಬರ್ ಮೋಸ!

ಉಡುಪಿ, ಫೆ.18: ಬುದ್ದಿವಂತರ ಜಿಲ್ಲೆಯೆಂದು ಹೆಸರು ಪಡೆದ ಉಡುಪಿ ಜಿಲ್ಲೆಯಲ್ಲಿ ಸೈಬರ್ ಮೋಸ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಫೇಸ್‌ಬುಕ್ ಪರಿಚಯವನ್ನು ನೆಪವಿಟ್ಟು ಮಹಿಳೆಯೊಬ್ಬರನ್ನು ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.

ರಾಣಿ (37) ಎಂಬವರು ಬ್ಯಾಂಕ್ ಆಫ್ ಬರೋಡಾ ಖಾತೆ ಹೊಂದಿದ್ದು, ಫೆಬ್ರವರಿ 4ರಂದು “Amadeo Luca” ಎಂಬ ಫೇಸ್‌ಬುಕ್ ಖಾತೆಯಿಂದ ಅಪರಿಚಿತ ವ್ಯಕ್ತಿಯೊಬ್ಬರು ಸಂದೇಶ ಕಳುಹಿಸಿದ್ದರು. ಬಳಿಕ ಮೆಸೆಂಜರ್ ಹಾಗೂ ವಾಟ್ಸಾಪ್ ಮೂಲಕ ನಿರಂತರ ಸಂಪರ್ಕದಲ್ಲಿದ್ದ ಆರೋಪಿಗಳು, ಫೆಬ್ರವರಿ 8ರಂದು ಪಾರ್ಸೆಲ್ ಕಳುಹಿಸಿರುವುದಾಗಿ ತಿಳಿಸಿ, ಅದರಲ್ಲಿ ಬಂಗಾರದ ಒಡವೆ, ಮೊಬೈಲ್ ಫೋನ್ ಹಾಗೂ ಡಾಲರ್ ಇರುವುದಾಗಿ ನಂಬಿಸಿದರು.

ಪಾರ್ಸೆಲ್ ಬಿಡುಗಡೆಗೊಳಿಸಲು ₹45,000 ಪಾವತಿಸಬೇಕೆಂದು ಹೇಳಿ, ಹಣವನ್ನು ಅಪರಿಚಿತ ಖಾತೆಗೆ NEFT ಮೂಲಕ ವರ್ಗಾವಣೆ ಮಾಡಿಸಿಕೊಂಡರು. ನಂತರವೂ ವಿವಿಧ ಶುಲ್ಕ, ತೆರಿಗೆ ಹಾಗೂ ಪ್ರೊಸೆಸಿಂಗ್ ಚಾರ್ಜ್‌ಗಳ ನೆಪದಲ್ಲಿ ಹಂತ ಹಂತವಾಗಿ ಒಟ್ಟು ₹7,10,000 ರೂಪಾಯಿಗಳನ್ನು ವಿವಿಧ ಖಾತೆಗಳಿಗೆ NEFT ಹಾಗೂ RTGS ಮೂಲಕ ವರ್ಗಾಯಿಸಿಕೊಳ್ಳಲಾಗಿದೆ.
ಆದರೆ ಪಾರ್ಸೆಲ್ ತಲುಪದೆ ಮತ್ತಷ್ಟು ಹಣದ ಬೇಡಿಕೆ ಮುಂದುವರಿದ ಹಿನ್ನೆಲೆ, ರಾಣಿ ಅವರು ತಾವು ಮೋಸ ಹೋಗಿರುವುದು ಅರಿತು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 12/2026ರಂತೆ 66(ಸಿ), 66(ಡಿ) ಐಟಿ ಕಾಯ್ದೆ ಹಾಗೂ 318(4) BNS ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಸೈಬರ್ ಪೊಲೀಸರ ಎಚ್ಚರಿಕೆ:
ಅಪರಿಚಿತರಿಂದ ಸಾಮಾಜಿಕ ಜಾಲತಾಣಗಳ ಮೂಲಕ ಬರುವ ಉಡುಗೊರೆ, ಪಾರ್ಸೆಲ್, ವಿದೇಶಿ ಹಣ ಇತ್ಯಾದಿ ಆಮಿಷಗಳಿಗೆ ಬಲಿಯಾಗದೆ, ಯಾವುದೇ ಹಣ ವರ್ಗಾವಣೆ ಮಾಡುವ ಮೊದಲು ಸೂಕ್ತ ಪರಿಶೀಲನೆ ಮಾಡುವುದು ಅಗತ್ಯವೆಂದು ಪೊಲೀಸರು ಮನವಿ ಮಾಡಿದ್ದಾರೆ.