ಡೈಲಿ ವಾರ್ತೆ: ಫೆ./18/2026

ಸಾಸ್ತಾನಕ್ಕೆ ಕೆಲಸಕ್ಕೆಂದು ಹೊರಟ ವ್ಯಕ್ತಿ ನಾಪತ್ತೆ: ಕೋಟ ಠಾಣೆಯಲ್ಲಿ ಪ್ರಕರಣ ದಾಖಲು

ಕೋಟ, ಫೆ.18: ಕೆಲಸ ನಿಮಿತ್ತ ಮನೆಯಿಂದ ಹೊರಟ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಅಚ್ಲಾಡಿ ಅಂಚೆ, ಬ್ರಹ್ಮಾವರ ನಿವಾಸಿ ಉದಯ ಕುಲಾಲ್ (43) ಅವರ ತಮ್ಮ ವಿಜಯ (38) ಅವರು ಕೃಷಿ ಹಾಗೂ ಹೈನುಗಾರಿಕೆ ಕೆಲಸ ಮಾಡಿಕೊಂಡಿದ್ದರು. ಫೆಬ್ರವರಿ 16ರಂದು ರಾತ್ರಿ ಸುಮಾರು 11:30 ಗಂಟೆ ವೇಳೆಗೆ “ಅಣ್ಣನ ಮನೆ ಸಾಸ್ತಾನಕ್ಕೆ ಕೆಲಸಕ್ಕೆ ಹೋಗುತ್ತೇನೆ” ಎಂದು ತಿಳಿಸಿ ಮನೆಯಿಂದ ತೆರಳಿದ್ದರು. ಆದರೆ ನಂತರ ಮನೆಗೆ ಮರಳಿ ಬಂದಿಲ್ಲ ಎಂದು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.

ವಿಜಯ ಅವರು ಸಾಸ್ತಾನದ ಮನೆಯಲ್ಲಿ ಮೋಟಾರ್ ಸೈಕಲ್ ಇಟ್ಟು “ಉಡುಪಿ ಹೋಗಿ ಬರುತ್ತೇನೆ” ಎಂದು ಹೇಳಿ ತೆರಳಿರುವುದಾಗಿ ತಿಳಿದುಬಂದಿದೆ. ಬಳಿಕ ಕುಟುಂಬಸ್ಥರು ಹಾಗೂ ಸಂಬಂಧಿಕರು ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರಕಿಲ್ಲ.

ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/2026ರಂತೆ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಾಪತ್ತೆಯಾದ ವಿಜಯ ಕುರಿತು ಯಾವುದೇ ಮಾಹಿತಿ ತಿಳಿದವರು ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.