ಡೈಲಿ ವಾರ್ತೆ: 08 ಮೇ 2023
ದ. ಕ. ಜಿಲ್ಲೆಯ ಅಲ್ಪಸಂಖ್ಯಾತರು ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ದ. ಕ. ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಹಾರೂನ್ ರಶೀದ್ ಕರೆ
ಬಂಟ್ವಾಳ : ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಪಸಂಖ್ಯಾತರು ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಹಾರೂನ್ ರಶೀದ್ ಕರೆ ನೀಡಿದ್ದಾರೆ.
ಸೋಮವಾರ ಬೆಳಿಗ್ಗೆ ಬಿ ಸಿ ರೋಡಿನ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ರಾಜ್ಯ ಕಂಡ ಅತ್ಯಂತ ಭ್ರಷ್ಟ ಹಾಗೂ ಸಂವಿಧಾನ ವಿರೋಧಿ ಸರಕಾರ ಎಂದರೆ ಅದು ಬೊಮ್ಮಾಯಿ ಸರಕಾರ. 40 ಪಸೆಂಟ್ ಸರಕಾರ ಎಂದು ಈಗಾಗಲೇ ಬೊಮ್ಮಾಯಿ ಸರಕಾರ ಕುಖ್ಯಾತಿ ಪಡೆದಿದ್ದು ಮಾತ್ರವಲ್ಲ ಅಲ್ಪಸಂಖ್ಯಾತ ವಿರೋಧಿ ಧೋರಣೆಗಳಿಂದಲೇ ಕಾಲ ಕಳೆದ ಈ ಸರಕಾರ ಸಂವಿಧಾನ ವಿರೋಧಿ ಸರಕಾರ ಎಂಬುದಕ್ಕೆ ಹಲವು ನಿದರ್ಶನಗಳು ಜಗಜ್ಜಾಹೀರಾಗಿವೆ. ಸರಕಾರದ ಕೊನೆ ಅವಧಿಯಲ್ಲಿ ಮುಸ್ಲಿಮರಿಗೆ ಈ ದೇಶದ ಸಂವಿಧಾನ ನಿಗದಿಪಡಿಸಿದ್ದ 2ಬಿ ಮೀಸಲಾತಿಗೂ ವಿಘ್ನ ತಂದ ಬೊಮ್ಮಾಯಿ ಸರಕಾರ ಸಂಪೂರ್ಣವಾಗಿ ಅಲ್ಪಸಂಖ್ಯಾತ ವಿರೋಧಿ ಧೋರಣೆ ಕೈಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮುಸ್ಲಿಮರಿಗೆ 2ಬಿ ಪ್ರವರ್ಗದಡಿ ಮೀಸಲಾತಿ ನೀಡಲಾಗಿರುವುದು ಧರ್ಮದ ಆಧಾರದಲ್ಲಲ್ಲ. ಬದಲಾಗಿ ಇತರ ಹಿಂದುಳಿದ ವರ್ಗಗಳಂತೆ ಕರ್ನಾಟಕದ ಮುಸ್ಲಿಂ ಸಮುದಾಯ ಕೂಡಾ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳೆಂದು ವೈಜ್ಞಾನಿಕವಾಗಿ ಅಧ್ಯಯನದ ಮೂಲಕ ಗುರುತಿಸಿ ಒಬಿಸಿ-ಇತರ ಹಿಂದುಳಿದ ವರ್ಗ ಮೀಸಲಾತಿಯನ್ನು ನೀಡಲಾಗಿದೆ. 1920ರ ಮಿಲ್ಲರ್ ಸಮಿತಿಯಿಂದಲೂ ಕರ್ನಾಟಕ ಮುಸ್ಲಿಂ ಸಮುದಾಯವನ್ನು ಅಬ್ರಾಹ್ಮಣ ಹಿಂದುಳಿದ ಸಮುದಾಯವೆಂದು ಪರಿಗಣಿಸಿ ಮೀಸಲಾತಿ ನೀಡಲಾಗಿದೆ, ಅದೇ ರೀತಿ ಸ್ವಾತಂತ್ರ್ಯಾ ನಂತರದ 1961ರ ನಾಗನಗೌಡ ಸಮಿತಿ, ವೆಂಕಟಸ್ವಾಮಿ ಆಯೋಗ ಹಾಗೂ 1990ರ ಜಿನ್ನಪ್ಪ ರೆಡ್ಡಿ ಆಯೋಗ ಕೂಡಾ ಮುಸ್ಲಿಮರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿರುವುದನ್ನು ಎತ್ತಿ ಹಿಡಿದಿದೆ ಎಂದ ಹಾರೂನ್ ರಶೀದ್ ಮುಸ್ಲಿಮರನ್ನು ಯಾವುದೇ ಅಧ್ಯಯನವಿಲ್ಲದೆ ಏಕಾಏಕಿ ಮುಂದುವರಿದ ಪಟ್ಟಿಗೆ ಸೇರಿಸಲು ಅವಕಾಶವಿಲ್ಲ. ಆದರೂ ಕೂಡಾ ಬೊಮ್ಮಾಯಿ ಸರಕಾರ ಯಾವುದೇ ವೈಜ್ಞಾನಿಕ ಅಧ್ಯಯನ ಸಮಿತಿಯ ಶಿಫಾರಸ್ಸು ಕೂಡಾ ಇಲ್ಲದೆ ಏಕಾಏಕಿ 2ಬಿ ಮೀಸಲಾತಿ ರದ್ದುಪಡಿಸಿರುವು ಸರಕಾರದ ಕೋಮು ಮನೋಭಾವನೇ ಸಾಕ್ಷಿಯಾಗಿದೆ. 1994 ರಲ್ಲಿ ಎಚ್ ಡಿ ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮುಸ್ಲಿಮರಿಗೆ ಶೇ 4 ಮೀಸಲಾತಿ ಜಾರಿ ಮಾಡಿದ್ದರು ಎಂದವರು ನೆನಪಿಸಿದರು.
ಬೊಮ್ಮಾಯಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಂದಿನಿಂದ ರಾಜ್ಯದೆಲ್ಲೆಡೆ ಅನೈತಿಕ ಪೆÇಲೀಸ್ ಗಿರಿ ಪ್ರಕರಣಗಳು ಧಾರಾಳವಾಗಿ ನಡೆದಿದ್ದು, ಯಾವುದೇ ಘಟನೆಯಲ್ಲೂ ಸೂಕ್ತ ಹಾಗೂ ಕಠಿಣ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಲ್ಲದೆ ಕೋಮು ವೈಷಮ್ಯದ ಘಟನೆಗಳಲ್ಲೂ ತುಷ್ಟೀಕರಣ ನೀತಿ ಅನುಸರಿಸಿದ ಬೊಮ್ಮಾಯಿ ಸರಕಾರ ಮೃತರಿಗೆ ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿಯೂ ಮಲತಾಯಿ ಧೋರಣೆ ಅನುಸರಿಸಿದೆ. ಅಲ್ಲದೆ ಆಝಾನ್, ಹಿಜಾಬ್, ಜಾತ್ರೆಯಲ್ಲಿ ವ್ಯಾಪಾರದಲ್ಲೂ ಕೋಮುವಾದ ಮೊದಲಾದ ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟು ಕೋಮು ಆಧಾರಿತ ರಾಜಕೀಯ ಮಾಡಲಾಗುತ್ತಿರುವುದು ಖಂಡನೀಯ. ಅಧಿಕಾರದಲ್ಲಿದ್ದು ರಾಜಧರ್ಮ ಪಾಲಿಸಬೇಕಾದ ಬೊಮ್ಮಾಯಿ ಅವರು ಒಂದು ವರ್ಗವನ್ನು ಓಲೈಸುತ್ತಾ ಇನ್ನೊಂದು ವರ್ಗವನ್ನು ದ್ವೇಷಿಸುವ ಕಾರ್ಯವನ್ನಷ್ಟೆ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಇದು ಅತ್ಯಂತ ಖಂಡನೀಯ ಹಾಗೂ ಅಕ್ಷಮ್ಯವಾಗಿದೆ ಎಂದರು.
ಸಂಘಟನೆಗಳ ನಿಷೇಧದ ಸಂದರ್ಭದಲ್ಲೂ ಸರಕಾರ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ. ಎರಡೂ ಕಡೆಯ ಕೋಮುವಾದಿ ಸಂಘಟನೆಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿರುವುದು ಸ್ಪಷ್ಟಗೊಂಡಿದ್ದರೂ ಸರಕಾರಗಳು ನಿಷೇಧಿಸುವ ಸಂದರ್ಭದಲ್ಲಿ ಒಂದು ಕೋಮಿಗೆ ಸೇರಿದ ಸಂಘಟನೆಗಳಿಗೆ ಮಾತ್ರ ನಿಷೇಧ ಹೇರಿ ಅಮಾಯಕರನ್ನು ಬಂಧಿಸಿ ಜೈಲಿಗಟ್ಟುವ ಹಾಗೂ ಮಾನಸಿಕ ಹಾಗೂ ಇತರ ರೀತಿಯ ಹಿಂಸೆ ನೀಡುವ ಶೋಚನೀಯ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಹಾರೂನ್ ರಶೀದ್ ಅವರು, ರಾಜ್ಯ ಸರಕಾರ ಜನರಿಗೆ ನ್ಯಾಯ ನೀತಿ ಧರ್ಮದ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಅದರಲ್ಲೂ ಮುಖ್ಯವಾಗಿ ಅಲ್ಪಸಂಖ್ಯಾತರ ಹಿತ ಕಾಪಾಡುವಲ್ಲಿ ಪೂರ್ಣವಾಗಿಯೂ ಹಿನ್ನಡೆ ಅನುಭವಿಸಿದೆ. ಈ ನಿಟ್ಟಿನಲ್ಲಿ ರಾಜ್ಯದ ಅಲ್ಪಸಂಖ್ಯಾತ ಸಮುದಾಯ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತ ವ್ಯಕ್ತಿ ರಾಜ್ಯಾಧ್ಯಕ್ಷರಾಗಿರುವ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿ ಬಡವರ ಪರ ಆಡಳಿತ ನಡೆಸಿದ ಇತಿಹಾಸ ಇರುವ ಜೆಡಿಎಸ್ ಪಕ್ಷವನ್ನು ಬಹುಮತದಿಂದ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಜನರ ಜೀವದೊಂದಿಗೆ ಚೆಲ್ಲಾಟವಾಡಿ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಹಿನ್ನಲೆಯಲ್ಲಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಪಕ್ಷದಿಂದ ಮಾತ್ರ ಜನರ ಹಿತ ಕಾಪಾಡಲು ಸಾಧ್ಯ. ಕಾಂಗ್ರೆಸ್ ಪಕ್ಷವನ್ನು ಜಾತ್ಯಾತೀತ ಎಂಬ ನೆಲೆಯಲ್ಲಿ ಜನ ಆರಿಸಿದರೂ ಅಭ್ಯರ್ಥಿಗಳು ಗೆದ್ದ ಬಳಿಕ ಅಧಿಕಾರ, ಹಣ ಹಾಗೂ ಅಂತಸ್ತಿನ ಆಸೆ, ಅಭಿಲಾಷೆಗಾಗಿ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಮಾರಾಟವಾಗುತ್ತಿರುವ ಸನ್ನಿವೇಶ ಕಂಡು ಬಂದಿದ್ದು, ಈ ನಿಟ್ಟಿನಲ್ಲಿ ಜನ ಬಿಜೆಪಿ-ಕಾಂಗ್ರೆಸ್ ಪಕ್ಷದಿಂದ ಸಂಪೂರ್ಣ ಭ್ರಮನಿರಶನರಾಗಿದ್ದು, ಇಂತಹ ಸಂದರ್ಭದಲ್ಲಿ ಪರ್ಯಾಯ ಆಯ್ಕೆ ಜನರ ಮುಂದಿರುವುದು ಜೆಡಿಎಸ್ ಮಾತ್ರವಾಗಿದೆ ಎಂದ ಹಾರೂನ್ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರಕಾರ ತಮ್ಮ ಭ್ರಷ್ಟಾಚಾರ ಹಾಗೂ ಸಂವಿಧಾನ ವಿರೋಧಿ ಧೋರಣೆಗಳನ್ನು ಪ್ರಶ್ನಿಸಿದವರನ್ನು ತನಿಖಾ ಸಂಸ್ಥೆಗಳ ಮೂಲಕ ಛೂಬಿಟ್ಟು ನಿಯಂತ್ರಿಸುವ ಹಂತಕ್ಕೆ ಬಂದಿದ್ದು, ಇದು ಯಾವುದೂ ಇನ್ನು ಹೆಚ್ಚು ಸಮಯ ನಡೆಯುವುದಿಲ್ಲ. ಜನ ಪ್ರಜ್ಞಾವಂತರಾಗಿದ್ದು ಮುಂದಿನ ದಿನಗಳಲ್ಲಿ ಈ ಭ್ರಷ್ಟ ಸರಕಾರಗಳನ್ನು ಜನ ಪೂರ್ಣವಾಗಿ ಕಿತ್ತೊಗೆಯಲಿದ್ದು, ಜನರ ರಕ್ತ ಹೀರಿದ ಈ ಸರಕಾರದ ಭಾಗವಾಗಿರುವವರೆಲ್ಲರೂ ಮುಂದಿನ ದಿನಗಳಲ್ಲಿ ಅದರ ಫಲ ಖಂಡಿತಾ ಉಣ್ಣಲಿದ್ದಾರೆ ಎಂದರು.
ಕೋವಿಡ್ ಹಾಗೂ ಲಾಕ್ ಡೌನ್ ಸಂದರ್ಭದಲ್ಲೂ ಬಿಜೆಪಿ ಸರಕಾರ ಹಾಗೂ ಬಿಜೆಪಿ ಪ್ರತಿನಿಧಿಗಳು ಭ್ರಷ್ಟಾಚಾರದಲ್ಲೇ ಮುಳುಗಿದ್ದು, ಎಲ್ಲಿಯೂ ಜನರ ಹಿತ ಕಾಪಾಡಲಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಎಲ್ಲಿಯೂ ಹೊಂದಾಣಿಕೆ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದು ಗಂಟೆಗೊಂದು ಆದೇಶ ನೀಡಿ ವಾಪಾಸು ಪಡೆದುಕೊಳ್ಳುವ ಮೂಲಕ ಜನರ ಜೀವದೊಂದಿಗೆ ಚೆಲ್ಲಾಟವಾಡಿದ್ದಾರೆ ಎಂದ ಅವರು ಅಧಿಕಾರದ ಎಲ್ಲ ರಂಗಗಳಲ್ಲೂ ವಿಫಲವಾಗಿರುವ ಬಿಜೆಪಿ ಸರಕಾರ ಇದೀಗ ಚುನಾವಣಾ ಹೊಸ್ತಿಲಲ್ಲಿ ಭಾವನಾತ್ಮಕವಾಗಿ ಮಾತನಾಡುವ ಮೂಲಕ ಮತ್ತೊಮ್ಮೆ ಜನರನ್ನು ಮುಂಡಾಮೋಚುವ ಭ್ರಮಾಲೋಕದಲ್ಲಿದ್ದಾರೆ. ರಸ್ತೆ-ಚರಂಡಿಗಳ ಮಾತನಾಡದೆ ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಜನರಿಗೆ ಕರೆ ಕೊಡುವ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರ ಹೇಳಿಕೆಯೇ ಅವರ ಮಾನಸಿಕ ಅಧಃಪತನಕ್ಕೆ ಸಾಕ್ಷಿಯಲ್ಲದೆ ಇನ್ನೇನು? ಅನರ್ಹರ ಕೈಗೆ ಅಧಿಕಾರ ಕೊಟ್ಟದ್ದಕ್ಕೆ ಕನ್ನಡಿಗರು ತಮ್ಮನ್ನು ತಾವೇ ಹಳಿದುಕೊಳ್ಳುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಬಿಜೆಪಿ ಸರಕಾರಗಳು ಎಲ್ಲಿವರೆಗೆ ದ್ರೋಹವೆಸಗಿದೆ ಎಂದರೆ ಶೈಕ್ಷಣಿಕ ಕ್ಷೇತ್ರವನ್ನೂ ಬಿಟ್ಟಿಲ್ಲ. ಧಾರ್ಮಿಕ ವಿಚಾರಗಳನ್ನು ಶಾಲಾ-ಕಾಲೇಜು ಕ್ಯಾಂಪಸ್ಸಿನೊಳಗೂ ತರಲಾಗಿದ್ದು, ಪರಸ್ಪರ ಪ್ರೀತಿ-ಸ್ನೇಹ- ಸೌಹಾರ್ದಯುತ ವಾತಾವರಣದಲ್ಲಿ ಬಾಳಿ ಬದುಕಿ ಈ ದೇಶದ ಸಮಗ್ರತೆಗೆ ಸೌಹಾರ್ದತೆಗೆ ಸಾಕ್ಷಿಗಳಾಗಬೇಕಿದ್ದ ವಿದ್ಯಾರ್ಥಿ ಸಮೂಹವನ್ನೂ ಭಾವನಾತ್ಮಕ ವಿಷಯಗಳಲ್ಲಿ ಕಟ್ಟಿಹಾಕಿ ತಮ್ಮ ಸ್ವಾರ್ಥ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ. ಅಲ್ಲದೆ ಶಾಲಾ-ವಿದ್ಯಾರ್ಥಿಗಳಿಗೆ ಈ ಹಿಂದಿನ ಸರಕಾರಗಳು ವಿವಿಧ ಇಲಾಖೆಗಳ ಅಡಿಯಲ್ಲಿ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನ, ಸಹಾಯಧನ ಹಾಗೂ ಸಾಲ ಸೌಲಭ್ಯಗಳಿಗೂ ಕಲ್ಲು ಹಾಕಿ ದೇಶದ ಭವಿಷ್ಯದ ಕುಡಿಗಳಾಗಿರುವ ವಿದ್ಯಾರ್ಥಿ ಸಮೂಹಕ್ಕೆ ಗಾಢ ದ್ರೋಹ ಎಸಗಿದೆ ಎಂದು ತೀವ್ರ ಅಸಹನೆ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷ ಈಗಾಗಲೇ ಹಲವು ಘೋಷಣೆಗಳನ್ನು ರಾಜ್ಯದ ಜನರಿಗೆ ಘೋಷಿಸಿದ್ದು, ಪ್ರಮುಖವಾಗಿ ಉಚಿತ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ, ಪ್ರತೀ ಗ್ರಾಮಗಳಲ್ಲಿ ಆರೋಗ್ಯ ಕೇಂದ್ರಗಳನ್ನು ತೆರೆದು ಜನರ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು, ರೈತರ ಹಾಗೂ ಸ್ತ್ರೀ ಶಕ್ತಿ ಸಾಲಮನ್ನಾ, ಯುವಕರಿಗೆ ಉದ್ಯೋಗ ನೀಡಲು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದ್ದು, ಅಟೋ ಚಾಲಕರಿಗೆ ಮಾಸಿಕ 2 ಸಾವಿರ ರೂಪಾಯಿ ಸಹಾಯಧನ ಹಾಗೂ ವರ್ಷಕ್ಕೆ 5 ಉಚಿತ ಅಡುಗೆ ಅನಿಲ ಸಿಲಿಂಡರ್ ಗಳನ್ನು ನೀಡುವ ಘೋಷಣೆಗಳನ್ನು ಈಗಾಗಲೇ ಪಂಚರತ್ನ ಯೋಜನೆಯಾಗಿ ಘೋಷಿಸಲಾಗಿದೆ ಎಂದು ಹೇಳಿದ ಹಾರೂನ್ ರಶೀದ್ ಅವರು, ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಈ ಎಲ್ಲಾ ಜನಪರ ಯೋಜನೆಗಳನ್ನು ತಕ್ಷಣದಿಂದ ಜಾರಿಗೆ ತರಲಾಗುವುದು. ಬಿಜೆಪಿ ಸರಕಾರ ಕೈಗೊಂಡ 2ಬಿ ಮೀಸಲಾತಿ ಸಹಿತ ಅಲ್ಪಸಂಖ್ಯಾತ ವಿರೋಧಿ ಹಾಗೂ ಜನ ವಿರೋಧಿ ನೀತಿಗಳನ್ನು ಜೆಡಿಎಸ್ ಅಧಿಕಾರಕ್ಕೆ ಬಂದ ತಕ್ಷಣ ವಾಪಾಸು ಪಡೆಯುವ ನಿಟ್ಟಿನಲ್ಲಿ ಈಗಾಗಲೇ ಜೆಡಿಎಸ್ ಜಿಲ್ಲಾ ಘಟಕದ ನಿಯೋಗ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದ್ದು, ಪೂರಕವಾಗಿ ಮಾಜಿ ಸಿಎಂ ಸ್ಪಂದಿಸಿದ್ದಾರೆ. ಎಲ್ಲವನ್ನೂ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾಜದ ಎಲ್ಲ ವರ್ಗಗಳ ಆಕ್ರೋಶ, ಕೋಪಕ್ಕೆ ಗುರಿಯಾಗಿರುವ ಈ ಅನೈತಿಕವಾಗಿ ಅಧಿಕಾರಕ್ಕೇರಿರುವ ಸರಕಾರದ ಆಯುಷ್ಯ ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಜನ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಅವಕಾಶ ನೀಡಿ ರಾಜ್ಯದ ಅಭಿವೃದ್ದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭ ಪಕ್ಷದ ಅಭ್ಯರ್ಥಿ ಪ್ರಕಾಶ್ ಗೋಮ್ಸ್, ಜೆಡಿಎಸ್ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಉಮೇಶ್ ಕುಮಾರ್ ವೈ, ಜೆಡಿಎಸ್ ಬಂಟ್ವಾಳ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಮುಹಮ್ಮದ್ ಶಫೀಕ್ ಆಲಡ್ಕ, ಪಕ್ಷ ಪ್ರಮುಖರಾದ ಜಾನ್ ಪೌಲ್ ಡಿ’ಸೋಜ, ಸವಾಝ್ ಬಂಟ್ವಾಳ, ಸತ್ತಾರ್ ಬಂಟ್ವಾಳ ಉಪಸ್ಥಿತರಿದ್ದರು.