ಡೈಲಿ ವಾರ್ತೆ: ಫೆ./17/2026

ಬ್ರಹ್ಮಾವರದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ಪೊಲೀಸ್ ದಾಳಿ: ಆರೋಪಿಗಳು ಪರಾರಿ, ಉಪಕರಣಗಳು ವಶ

ಬ್ರಹ್ಮಾವರ, ಫೆ.17: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಯಡ್ತಾಡಿ ಗ್ರಾಮದ ಅಲ್ತಾರು ಕಲ್ಕಟ್ಟು ಪ್ರದೇಶದಲ್ಲಿ ಅಕ್ರಮವಾಗಿ ಶಿಲೆ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದವರ ಮೇಲೆ ಬ್ರಹ್ಮಾವರ ಪೊಲೀಸರು ದಾಳಿ ನಡೆಸಿ ಕಲ್ಲು ಹಾಗೂ ಉಪಕರಣಗಳನ್ನು ವಶಪಡಿಸಿಕೊಂಡ ಘಟನೆ ಫೆಬ್ರವರಿ 16ರಂದು ಸಂಜೆ ನಡೆದಿದೆ.

ದಿನಾಂಕ ಫೆ.16ರಂದು ಸಂಜೆ 4:45ರ ಸುಮಾರಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಅಶೋಕ್ ಮಾಳಬಾಗಿ ಅವರಿಗೆ ಭಾತ್ಮಿದಾರರಿಂದ ಖಚಿತ ಮಾಹಿತಿ ಲಭಿಸಿತ್ತು.

ಯಡ್ತಾಡಿ ಗ್ರಾಮದ ಅಲ್ತಾರು ಕಲ್ಕಟ್ಟು ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಕೆಲವರು ಅಕ್ರಮವಾಗಿ ಶಿಲೆ ಕಲ್ಲು ಒಡೆದು ಕಳ್ಳತನ ಮಾಡಿ ಸಾಗಾಟಕ್ಕೆ ಸಂಗ್ರಹಿಸುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಸಿಬ್ಬಂದಿಗಳೊಂದಿಗೆ ಪಂಚರನ್ನು ಕರೆದುಕೊಂಡು ಸ್ಥಳಕ್ಕೆ ತೆರಳಿದರು.
ಸಂಜೆ 5:30ರ ಸುಮಾರಿಗೆ ದಾಳಿ ನಡೆಸಿದ ವೇಳೆ ಸ್ಥಳದಲ್ಲಿದ್ದ ನಾಲ್ವರು ಪೊಲೀಸರು ಬಂದಿರುವುದನ್ನು ಗಮನಿಸಿ ಪರಾರಿಯಾಗಿದ್ದಾರೆ. ಅವರಲ್ಲಿ ಒಬ್ಬನು ಯಡ್ತಾಡಿಯ ಅಜಿತ್ ಶೆಟ್ಟಿ ಎಂದು ಗುರುತಿಸಲಾಗಿದೆ.

ಸ್ಥಳ ಪರಿಶೀಲನೆ ನಡೆಸಿದಾಗ ಸುಮಾರು 40 ಸೆಂಟ್ಸ್ ಜಾಗದಲ್ಲಿ ಸುಮಾರು 20 ಅಡಿ ಆಳದ ಕಲ್ಲು ಕೊರೆ ಕಂಡುಬಂದಿದ್ದು, ಅಲ್ಲಿ ಶಿಲೆ ಕಲ್ಲುಗಳನ್ನು ಸುತ್ತಿಗೆ ಹಾಗೂ ಚೇನಾ ಉಪಕರಣಗಳಿಂದ ಒಡೆದು ಒಂದು ಲೋಡ್ ರಾಶಿಯಾಗಿ ಸಂಗ್ರಹಿಸಿದ್ದನ್ನು ಪೊಲೀಸರು ಪತ್ತೆಹಚ್ಚಿದರು. ವಶಪಡಿಸಿಕೊಂಡ ಶಿಲೆ ಕಲ್ಲಿನ ಅಂದಾಜು ಮೌಲ್ಯ ರೂ.5,000 ಎಂದು ತಿಳಿದುಬಂದಿದೆ.
ಅಲ್ಲದೆ ಕಲ್ಲು ಒಡೆಯಲು ಬಳಸುತ್ತಿದ್ದ 5 ಕಬ್ಬಿಣದ ಚೇನಾ, 2 ಕಬ್ಬಿಣದ ಸಬ್ಬಲ, 1 ಮರದ ಹಿಡಿಯ ಕಬ್ಬಿಣದ ಸುತ್ತಿಗೆ ಹಾಗೂ 1 ಕಬ್ಬಿಣದ ಚಿಮ್ಟಿ ಉಪಕರಣಗಳನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಳ್ಳಲಾಗಿದೆ.

ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 31/2026ರಂತೆ BNS-2023ರ ಕಲಂ 112, 303(2) ಹಾಗೂ MMRD ಕಾಯ್ದೆಯ 4(1), 4(1A), 21(1)(2)ರಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.