ಡೈಲಿ ವಾರ್ತೆ: ಫೆ./17/2026

ಬಾಡಿಗೆ ಮನೆ ಹುಡುಕಲು ಹೋದ ಫೋಟೋಗ್ರಾಫರ್ ಈಗ ಪೊಲೀಸ್ ಅತಿಥಿ: 55 ಲಕ್ಷದ ಚಿನ್ನ ಕದ್ದು ‘ಮಾದಪ್ಪ’ನ ದರ್ಶನ ಪಡೆದಿದ್ದ ಕಳ್ಳ ಅರೆಸ್ಟ್!

​ಬೆಂಗಳೂರು: ಬಾಡಿಗೆ ಮನೆ ಹುಡುಕುವ ನೆಪದಲ್ಲಿ ಹೋಗಿ, ಸಿಕ್ಕ ಅವಕಾಶವನ್ನು ಬಳಸಿಕೊಂಡು ಬರೋಬ್ಬರಿ 55 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಫೋಟೋಗ್ರಾಫರ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬಂಧಿತ ಆರೋಪಿ ವೈಟ್‌ಫೀಲ್ಡ್ ನಿವಾಸಿ ಕಿರಣ್ ಎಂದು ಗುರುತಿಸಲಾಗಿದೆ.

​ಘಟನೆಯ ಹಿನ್ನೆಲೆ:
​ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಕಿರಣ್, ಕೋವಿಡ್ ಸಮಯದಲ್ಲಿ ಸ್ಟುಡಿಯೋ ನಷ್ಟಕ್ಕೊಳಗಾಗಿ ಮುಚ್ಚಿದ್ದ. ಸದ್ಯ ಸಣ್ಣಪುಟ್ಟ ಕಾರ್ಯಕ್ರಮಗಳ ಫೋಟೋ ತೆಗೆಯುತ್ತಾ ಜೀವನ ಸಾಗಿಸುತ್ತಿದ್ದ ಈತ, ವೈಟ್‌ಫೀಲ್ಡ್‌ನ ನಾಗೊಂಡನಹಳ್ಳಿಯಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದ. ಈ ವೇಳೆ ಸಾಫ್ಟ್‌ವೇರ್ ಎಂಜಿನಿಯರ್ ಜಗದೀಶ್ ಎಂಬುವವರ ಮನೆಯ ಮುಂದೆ ‘ಮನೆ ಬಾಡಿಗೆಗೆ ಇದೆ’ ಎಂಬ ಬೋರ್ಡ್ ಕಂಡು ವಿಚಾರಿಸಲು ಹೋಗಿದ್ದಾನೆ.

ಶೂ ರ್ಯಾಕ್‌ನಲ್ಲಿದ್ದ ಬೀಗವೇ ಕಳ್ಳನಿಗೆ ದಾರಿ:
​ಮನೆಯ ಬಳಿ ಹೋದಾಗ ಅಲ್ಲಿ ಯಾರೂ ಇರಲಿಲ್ಲ. ಆದರೆ, ಕಿರಣ್ ಕಣ್ಣಿಗೆ ಶೂ ರ್ಯಾಕ್‌ನಲ್ಲಿ ಇರಿಸಲಾಗಿದ್ದ ಮನೆಯ ಬೀಗ ಕಂಡಿದೆ. ತಕ್ಷಣವೇ ಆ ಬೀಗ ಬಳಸಿ ಮನೆ ಪ್ರವೇಶಿಸಿದ ಈತ, ಕಪಾಟಿನಲ್ಲಿದ್ದ 348 ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ. ಮನೆಗೆ ಹಿಂದಿರುಗಿದ ಮಾಲೀಕ ಜಗದೀಶ್ ಕಳ್ಳತನವಾಗಿರುವುದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದರು.

​ಪಾಪಪ್ರಜ್ಞೆ ಮತ್ತು ಮಾದಪ್ಪನ ದರ್ಶನ:
​ಕಳ್ಳತನ ಮಾಡಿದ ನಂತರ ಆರೋಪಿ ಕಿರಣ್‌ಗೆ ತಾನು ಮಾಡಿದ ಕೆಲಸದ ಬಗ್ಗೆ ಪಾಪಪ್ರಜ್ಞೆ ಕಾಡತೊಡಗಿತ್ತು ಎನ್ನಲಾಗಿದೆ. ಹೀಗಾಗಿ ಮನಃಶಾಂತಿಗಾಗಿ ಹಾಗೂ ದೋಷ ಮುಕ್ತಿಗಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮಾದಪ್ಪನ ದರ್ಶನ ಪಡೆದಿದ್ದ. ಆದರೆ, ಇತ್ತ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದ್ದ ವೈಟ್‌ಫೀಲ್ಡ್ ಪೊಲೀಸರು ಆರೋಪಿಯ ಚಲನವಲನಗಳನ್ನು ಪತ್ತೆ ಹಚ್ಚಿದ್ದರು.

​ಪೊಲೀಸ್ ಕಾರ್ಯಾಚರಣೆ:
​ಮಲೆ ಮಹದೇಶ್ವರ ಬೆಟ್ಟದಿಂದ ಬೆಂಗಳೂರಿಗೆ ಹಿಂದಿರುಗುತ್ತಿದ್ದಂತೆಯೇ ಹೊಂಚು ಹಾಕಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 55 ಲಕ್ಷ ಮೌಲ್ಯದ 348 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೀವನದ ಸಂಕಷ್ಟಕ್ಕೆ ಬೆದರಿ ಕಳ್ಳತನದ ಹಾದಿ ಹಿಡಿದ ಫೋಟೋಗ್ರಾಫರ್ ಈಗ ಜೈಲು ಪಾಲಾಗಿದ್ದಾನೆ.