

ಡೈಲಿ ವಾರ್ತೆ: ಫೆ./17/2026
ಮಲ್ಪೆ| ನೌಕಾಪಡೆ ರಹಸ್ಯ ಮಾಹಿತಿ ರವಾನೆ ಪ್ರಕರಣ: 5ನೇ ಆರೋಪಿ ಬಂಧನ

ಉಡುಪಿ, ಫೆ.17: ನೌಕಾಪಡೆಯ ಹಡಗುಗಳಿಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಅಕ್ರಮವಾಗಿ ರವಾನೆ ಮಾಡಿದ ಪ್ರಕರಣದಲ್ಲಿ 5ನೇ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಮಲ್ಪೆ ಪೊಲೀಸ್ ಸ್ಟೇಷನ್ ಅಪರಾಧ ಕ್ರಮಾಂಕ 128/2025ರಂತೆ, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 152, 61(1), ಅಧಿಕೃತ ರಹಸ್ಯ ಕಾಯ್ದೆ 1923ರ ಕಲಂ 3, 5 ಹಾಗೂ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (UAPA) ಕಲಂ 18ರಡಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲಿಫ್ ಇಸ್ಲಾಮ್ (21) ಎಂಬಾತನನ್ನು 16/02/2026 ರಂದು ಬಂಧಿಸಲಾಗಿದೆ.
ಬಂಧಿತ ಆಲಿಫ್ ಇಸ್ಲಾಮ್ ಪಶ್ಚಿಮ ಬಂಗಾಳ ರಾಜ್ಯದ ಜಾಲ್‌ಪೈಗುರಿ ಜಿಲ್ಲೆಯ ಬರಗಾರಿಯ ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ಕೇರಳ ರಾಜ್ಯದ ಇಡುಕಿ ಜಿಲ್ಲೆಯ ಮುನಾರ್ ಸಮೀಪದ ಮರಾಯು ಗ್ರಾಮದ ಕೋಕಿಲ್ಕಟ್ಟ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ನೌಕಾಪಡೆಯ ಹಡಗುಗಳ ಸಂವೇದನಶೀಲ ಮಾಹಿತಿಯನ್ನು ಅನಧಿಕೃತವಾಗಿ ಸಂಗ್ರಹಿಸಿ ರವಾನೆ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ಮುಂದುವರಿದ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.
ಬಂಧಿತನನ್ನು ಇಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆಬ್ರವರಿ 21, 2026ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.