ಡೈಲಿ ವಾರ್ತೆ: ಫೆ./17/2026

ಅವಧಿಮೀರಿ ಧ್ವನಿವರ್ಧಕ ಬಳಕೆ: ಬ್ರಹ್ಮಾವರದಲ್ಲಿ ಸಂಸ್ಥೆ ವಿರುದ್ಧ ಪ್ರಕರಣ ದಾಖಲು

ಬ್ರಹ್ಮಾವರ, ಫೆ.17: ಅವಧಿಮೀರಿ ಧ್ವನಿವರ್ಧಕ ಬಳಸಿದ ಆರೋಪದಡಿ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಹಂದಾಡಿ ಗ್ರಾಮದ ಗಾಂಧಿಮೈದಾನದಲ್ಲಿ ನಡೆದ ಅಭಿಮತ ಸಂಭ್ರಮ ಕಾರ್ಯಕ್ರಮಕ್ಕೆ ಸಂಬಂಧಿಸಿ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಜನಸೇವಾ ಟ್ರಸ್ಟ್ (ರಿ), ಗಿಳಿಯಾರು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ರಸ್ತೆ, ಕುಂಭಾಶಿ, ಉಡುಪಿ ಇವರ ವತಿಯಿಂದ ದಿನಾಂಕ 14/02/2026ರಂದು ಸಂಜೆ 6:00ರಿಂದ ರಾತ್ರಿ 10:00 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸುವಂತೆ ಅನುಮತಿ ನೀಡಲಾಗಿತ್ತು. ಆದರೆ, ನಿಗದಿತ ಅವಧಿಯನ್ನು ಮೀರಿ ಧ್ವನಿವರ್ಧಕ ಬಳಕೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಪರವಾನಗಿಯಲ್ಲಿ ವಿಧಿಸಿದ ಷರತ್ತುಗಳನ್ನು ಉಲ್ಲಂಘಿಸಿ ಕರ್ನಾಟಕ ಪೊಲೀಸ್ ಕಾಯ್ದೆಗೆ ವಿರುದ್ಧವಾಗಿ ನಡೆದುಕೊಂಡಿರುವುದಾಗಿ ಫಿರ್ಯಾದಿದಾರರು ವರದಿ ನೀಡಿದ್ದಾರೆ.

ದಿನಾಂಕ 15/02/2026ರಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ NC No. 87/PTN/BVR/2026 ಎಂದು ದಾಖಲಿಸಿಕೊಂಡು, ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗಿದೆ.

ಈ ಕುರಿತು ಪೊಲೀಸ್ ಉಪನಿರೀಕ್ಷಕ ಅಶೋಕ್ ಮಾಳಬಾಗಿ ಅವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 32/2026ರಡಿ BNS-2023 ಕಲಂ 292 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 109 ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.