ಡೈಲಿ ವಾರ್ತೆ: 14 ಮೇ 2023
ಡಿ.ಕೆ.ಶಿವಕುಮಾರ್ ರನ್ನು ಮುಖ್ಯಮಂತ್ರಿ ಮಾಡಲು ಒಕ್ಕಲಿಗರ ಸಂಘದಿಂದ ಮನವಿ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಸಾರಥ್ಯದಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತಗಳಿಸಿದೆ. ರಾಜ್ಯದ ಮುಖ್ಯಮಂತ್ರಿಯಾಗಲು ಶಿವಕುಮಾರ್ ಅವರಿಗೆ ಒಂದು ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ ಅವರು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರಾದವರು ಮುಖ್ಯಮಂತ್ರಿ ಆಗುವ ಸಂಪ್ರದಾಯ ಕಾಂಗ್ರೆಸ್ ನಲ್ಲಿದೆ. ಸಂಪ್ರದಾಯದಂತೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಅವರು ಹೇಳಿದರು.
ಕಾಂಗ್ರೆಸ್ ಪ್ರಚಂಡ ಬಹುಮತ ಗಳಿಸಲು ಕೆಪಿಸಿಸಿ ಅಧ್ಯಕ್ಷರಾಗಿ ಅವರು ಶ್ರಮಪಟ್ಟಿದ್ದಾರೆ. ಪಕ್ಷಕ್ಕಾಗಿ ತ್ಯಾಗ ಮಾಡಿದ್ದಾರೆ. ಶ್ರಮಪಟ್ಟವರಿಗೆ ಅಧಿಕಾರ ಸಿಗಬೇಕು ಎಂಬುದು ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸಮುದಾಯದ ಮನವಿಯಾಗಿದೆ. ರೈತ ಕಷ್ಟಪಟ್ಟು ಬೆಳೆ ಬೆಳೆಸಿ ಫಸಲು ತೆಗದಂತೆಯೇ ಶಿವಕುಮಾರ್ ಕಷ್ಟಪಟ್ಟು ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಕೆಂಪೇಗೌಡ ಆಸ್ಪತ್ರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಎಂ.ಎಸ್.ಉಮಾಪತಿ ಶ್ರೀನಿವಾಸಗೌಡ ಮಾತನಾಡಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಬಂದಿದೆ. ಇಲ್ಲಿವರೆಗೂ ಒಕ್ಕಲಿಗ ಸಮುದಾಯದ ನಡೆಸಿದ ಹೋರಾಟಗಳು ಯಶಸ್ವಿಯಾಗಿವೆ ಎಂದರು.
ನಮ್ಮ ಕುಲಕ್ಕೆ ಆದಿಚುಂಚನಗಿರಿ ಮಠ ಕಲಶವಿದ್ದಂತೆ. ದೇವಾಲಯವಿದ್ದಂತೆ ಡಿಕೆಶಿ ಅವರಿಗೆ ಮುಖ್ಯಮಂತ್ರಿಯಾಗಲು ಒಂದು ಅವಕಾಶ ಸಿಗಲೇಬೇಕು ಎಂಬ ಉದ್ದೇಶದಿಂದ ಅವರಿಗೆ ಬೆಂಬಲವಾಗಿ ಒಕ್ಕಲಿಗರ ಸಂಘ ಮತ್ತು ಸಮುದಾಯವಿದೆ. ಪಕ್ಷಕ್ಕಾಗಿ ಶಿವಕುಮಾರ್ ದುಡಿಮೆ ಇದೆ. ಮೇಕೆದಾಟು ಯೋಜನೆಗಾಗಿ ಹೋರಾಟ ಮಾಡಿದ್ದರು. ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಯಶಸ್ವಿಯಾಗಲು ಅವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಪಕ್ಷಕ್ಕಾಗಿ ದುಡಿದಿದ್ದಾರೆ. ಬಂಡೆಯಾಗಿ ನಿಂತು ಹೋರಾಟ ಮಾಡಿದ್ದಾರೆ. ಪಕ್ಷಕ್ಕೆ ಅವರ ಕೊಡುಗೆ ಬಹಳಷ್ಟು ಇದೆ. ಮುಖ್ಯಮಂತ್ರಿಯಾಗಲು ಒಂದು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡುತ್ತಿದ್ದೇವೆ. ಆದರೆ, ಒತ್ತಡ ಹಾಕುತ್ತಿಲ್ಲ. ಸಮುದಾಯ ಅವರಿಗೆ ಒಗ್ಗಟ್ಟಾಗಿ ಬೆಂಬಲವಾಗಿ ನಿಂತಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುಗೆಯೂ ಇದೆ. ಆದರೆ ಸಿದ್ದರಾಮಯ್ಯ ಅವರು 5 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಶಿವಕುಮಾರ್ ಅವರಿಗೆ ಅವಕಾಶ ಸಿಕ್ಕಿಲ್ಲ. ಈಗ ಅವಕಾಶಕ್ಕಾಗಿ ಕಾಲ ಕೂಡಿ ಬಂದಿದೆ ಎಂದು ಅವರು ಹೇಳಿದರು.
ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಿ.ಹನುಮಂತಯ್ಯ ಅವರು, ಆಂತರಿಕ ಲೆಕ್ಕ ಪರಿಶೋಧಕರಾದ ಹನುಮಂತರಾಯಪ್ಪ ಅವರು, ಶಿಸ್ತುಪಾಲನಾ ಸಮಿತಿ ಅಧ್ಯಕ್ಷರಾದ ಲೋಕೇಶ್ ಡಿ.ನಾಗರಾಜಯ್ಯ ಅವರು, ಸಂಘದ ದಂತ ಮಹಾ ವಿದ್ಯಾಲಯದ ಅಧ್ಯಕ್ಷರಾದ ಜೆ.ರಾಜು, ಬಿ.ಐ.ಟಿ.ಅಧ್ಯಕ್ಷರಾದ ಎಂ.ಪುಟ್ಟಸ್ವಾಮಿ ಅವರು, ಕಿಮ್ಸ್ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ದೇವರಾಜ್ ಅವರು ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಇದ್ದರು.