ಡೈಲಿ ವಾರ್ತೆ:19 ಮೇ 2023
ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಯಾರೂ ದೃತಿಗೆಡಬೇಕಾಗಿಲ್ಲ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ – ಮಾಜಿ ಸಚಿವ ರಮಾನಾಥ್ ರೈ
ಬಂಟ್ವಾಳ : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸೋತಿದೆ ಎಂದು ಪಕ್ಷದ ಕಾರ್ಯಕರ್ತರು ಯಾರೂ ಯಾವುದೇ ಕಾರಣಕ್ಕೂ ದೃತಿಗೆಡಬೇಕಾಗಿಲ್ಲ. ರಾಜ್ಯದಲ್ಲಿ ಬಹುಮತದ ಸರಕಾರ ಬಂದಿದೆ. ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ ಭರವಸೆ ನೀಡಿದರು.
ಶುಕ್ರವಾರ ಬೆಳಿಗ್ಗೆ ಬಿ.ಸಿ. ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇವೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಪುಟಿದೇಳಲಿದೆ ಎಂದರು.
ಈ ಹಿಂದೆ ಸರಕಾರ ನಡೆಸಿದ್ದ ವೇಳೆ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಶೇ 99 ಭರವಸೆಗಳನ್ನು ಈಡೇರಿಸಿದ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸಿ ಬಹುಮತದ ಗೆಲುವಿಗೆ ಸಹಕರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಪಮುಖ್ಯಂತ್ರಿ ಆಗುತ್ತಿದ್ದಾರೆ, ನಮಗೆ ಇದರಷ್ಟು ಸಂತೋಷದ ವಿಚಾರ ಬೇರೊಂದಿಲ್ಲ. ಇವರಿಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಮಸ್ತ ಕಾರ್ಯಕರ್ತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದರು.
ಬಿಜೆಪಿ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ 10 ಶೇಕಡಾ ಕೂಡಾ ಭರವಸೆಗಳನ್ನು ಈಡೇರಿಸಿಲ್ಲ. ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಯಾರಿಗೂ ಸಂದೇಹ ಬೇಡ, ಬಿಜೆಪಿಯ ಹಾಗೆ ಕಾಂಗ್ರೆಸ್ ಯಾವತ್ತೂ ವಚನಭ್ರಷ್ಟ ಆಗಲಾರದು. ವಚನಭ್ರಷ್ಟ ಖ್ಯಾತಿ ಏನಿದ್ದರೂ ಬಿಜೆಪಿಗೆ ಸಲ್ಲುತ್ತದೆ ಎಂದರು.
ರಮಾನಾಥ ರೈ ಕ್ಷೇತ್ರದಲ್ಲಿ ಗೆದ್ದರೆ ಅಕ್ರಮಗಳಿಗೆ ಅವಕಾಶ ಇಲ್ಲ ಎಂದು ಅಕ್ರಮ ಮರಳು ದಂಧೆಕೋರರು ಗ್ರಾಮ-ಗ್ರಾಮಕ್ಕೆ ಹಣ ಹಂಚುವ ಮೂಲಕ ನನ್ನ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದಕ್ಕೆ ಕೆಲವೊಂದು ಹಿರಿಯ ಅಧಿಕಾರಿಗಳ ಸಹಕಾರ ಕೂಡಾ ಇದೆ ಎಂದು ಆರೋಪಿಸಿದ ರಮಾನಾಥ ರೈ ನಾಮಕಾವಸ್ಥೆ ಪ್ರಗತಿಪರ ಕೃಷಿಕರು ಎಂದೇಳಿಕೊಂಡು ವ್ಯಾಪಾರ ವಹಿವಾಟು ನಡೆಸುವವರು ಅಕ್ರಮ ದುಡ್ಡಿನ ಬಲದಿಂದ ನನ್ನನ್ನು ವಾಮಮಾರ್ಗದಿಂದ ಸೋಲಿಸಿದ್ದಾರೆ, ಸಮಾಜ ಸೇವೆ ನನ್ನ ಕಸುಬು, ಸಮಾಜಕ್ಕಾಗಿಯೇ ನಾನು ಬದುಕಿದ್ದೇನೆ, ನಾನು ಎಲ್ಲಿಂದಲೋ ಬಂದು ಇಲ್ಲಿ ಚುನಾವಣೆಗೆ ನಿಂತು ವ್ಯಾಪಾರ-ಉದ್ದಿಮೆ ಮಾಡಿದವಲ್ಲ, ಆದರೆ ಕೆಲವರು ಸಮಾಜ ಸೇವೆಯ ಹೆಸರಿನಲ್ಲಿ ದಂಧೆ ಮಾಡುವವರಿದ್ದಾರೆ ಎಂದು ಪರೋಕ್ಷವಾಗಿ ಬಂಟ್ವಾಳ ಶಾಸಕರ ವಿರುದ್ದ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಲಿದ್ದು ನನ್ನ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಬಾಕಿಯಾದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಯತ್ನ ಮಾಡುತ್ತೇನೆ. ನಾನು ಯಾವತ್ತೂ, ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಮಾಡುವುದೇ ಇಲ್ಲ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೇನೆ ಎಂಬುದನ್ನು ಕೆಲವರು ರಾಜಕೀಯ ನಿವೃತ್ತಿ ಎಂದು ತಪ್ಪಾಗಿ ಅರ್ಥೈಸಿಕೊಂಡು ನನಗೆ ಅನೇಕ ಕರೆ-ಸಂದೇಶಗಳ ಮೂಲಕ ಸೇವೆ ಮುಂದುವರಿಕೆಗೆ ಆಗ್ರಹಿಸಿದ್ದಾರೆ. ಅವರ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ. ನನ್ನ ಬದುಕಿನ ಸಂತೋಷವೇ ಜನರ ಸೇವೆಯಾಗಿದೆ. ಕಾಂಗ್ರೆಸ್ ಪಕ್ಷ ನನಗೆ ತಾಯಿಗೆ ಸಮಾನವಾಗಿದೆ. ಹೀಗಿರುತ್ತಾ ರಾಜಕೀಯದಿಂದ ಹಾಗೂ ಜನರ ಸೇವೆಯಿಂದ ನಾನು ಯಾವತ್ತೂ ನಿವೃತ್ತಿ ಆಗುವುದಿಲ್ಲ. ಪಕ್ಷದ ಕೆಲಸದಿಂದ ಯಾವತ್ತೂ ದೂರ ಆಗುವುದೂ ಇಲ್ಲ. ಪಕ್ಷದ ಹೈಕಮಾಂಡ್ ನ ಆದೇಶ ಪಾಲನೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಬರುತ್ತೇನೆ ಎಂದರು.
ಕ್ಷೇತ್ರದ ಜನರೇ ನನಗೆ ಸರ್ವಸ್ವ, ಕ್ಷೇತ್ರದ ಜನರನ್ನು ನಾನು ನನ್ನ ಕುಟುಂಬದ ಸದಸ್ಯರಂತೆ ಕಂಡಿದ್ದೇನೆ. ರಾಜಕೀಯದ, ಸೇವೆಯ ಹೆಸರಿನಲ್ಲಿ ನಾನು ಯಾವತ್ತೂ ಕಮಿಷನ್ ದಂಧೆ ಮಾಡಿಲ್ಲ. ಆರ್ಥಿಕ ಸಂಪನ್ನನಾಗಿ ನಾನು ರಾಜಕೀಯ ಮಾಡಿಲ್ಲ. ಕಷ್ಟದಿಂದ ರಾಜಕೀಯ ಮಾಡಿದ್ದೇನೆ. ಹದಿಮೂರು ವರ್ಷ ಮಂತ್ರಿ ಯಾಗಿದ್ದರೂ ಹಣ ಮಾಡುವ ಗೋಜಿಗೆ ನಾನು ಹೋಗಿಲ್ಲ. ಕುಟುಂಬ ನೀಡಿದ ಜಮೀನಿನಲ್ಲಿದ್ದುಕೊಂಡು ಸೇವೆ ಮಾಡಿದ್ದೇನೆ ಎಂದ ರೈ ದೇಶದಲ್ಲೇ ಕಾಂಗ್ರೆಸ್ ಸೋತಾಗ ದಕ್ಷಿಣ ಕನ್ನಡ ಜಿಲ್ಲೆಯ ಜನ ಕಾಂಗ್ರೆಸ್ ಕೈ ಹಿಡಿದಿದ್ದರು. ಮತ್ತೆ ಇತಿಹಾಸ ಮರುಕಳಿಸಲಿದೆ. ಭೂಮಸೂದೆ ಕಾನೂನು ಸಾಕಷ್ಟು ಪರಿಣಾಮ ಬೀರಿದ್ದು ಜಿಲ್ಲೆಯಲ್ಲಿ. ಹೆಚ್ಚು ನಿವೇಶನ ಕೊಟ್ಟ, ಹಕ್ಕುಪತ್ರ ಕೊಟ್ಟದ್ದು ಎಲ್ಲವೂ ಜಿಲ್ಲೆಯ ಇತಿಹಾಸ. ಹೆಚ್ಚಿನ ಕಾಂಗ್ರೆಸ್ ಯೋಜನೆಗಳ ಫಲಾನುಭವಿಗಳು ಜಿಲ್ಲೆಯಲ್ಲಿದ್ದಾರೆ. ಎಡ ಪಂಥೀಯ ಚಳುವಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದದ್ದು ಜಿಲ್ಲೆಯಲ್ಲಿ. ಈ ಎಲ್ಲಾ ಹೋರಾಟಗಳನ್ನು ಅನುಷ್ಠಾನ ಮಾಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ರಮಾನಾಥ ರೈ ಹೇಳಿದರು.
ಈ ಸಂದರ್ಭ ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪಕ್ಷ ಪ್ರಮುಖರುಗಳಾದ ಬಿ ಪದ್ಮಶೇಖರ ಜೈನ್, ಬಿ.ಎಂ. ಅಬ್ಬಾಸ್ ಅಲಿ, ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಜೋರಾ, ಸದಾಶಿವ ಬಂಗೇರ, ಸುಭಾಶ್ಚಂದ್ರ ಶೆಟ್ಟಿ, ಬಿ. ಮೋಹನ್, ಜಗದೀಶ್ ಕೊಯಿಲ, ಮೊದಲಾದವರು ಜೊತೆಗಿದ್ದರು.