ಡೈಲಿ ವಾರ್ತೆ: 23 ಮೇ 2023
1000 ರೂ. ಮುಖಬೆಲೆಯ ನೋಟುಗಳನ್ನು ಮರು ತರುವ ಯಾವುದೇ ಪ್ರಸ್ತಾಪವಿಲ್ಲ:ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್
ನವದೆಹಲಿ: ರಿಸರ್ವ್ ಬ್ಯಾಂಕ್ 2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದೆ. ಇದರ ಬೆನ್ನಲ್ಲಿಯೇ 1,000 ರೂ. ನೋಟುಗಳು ಮತ್ತೆ ಬರುತ್ತವೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ 1,000 ರೂ. ನೋಟು ಪರಿಚಯಿಸುವ ಯಾವುದೇ ಆಲೋಚನೆ ಇಲ್ಲ. ಈ ಬಗ್ಗೆಗಿನ ವರದಿಗಳು ಊಹಾತ್ಮಕ ಎಂದು ಹೇಳಿದ್ದಾರೆ.
1,000 ರೂ. ನೋಟುಗಳನ್ನು ಮರು ತರುವ ಯಾವುದೇ ಪ್ರಸ್ತಾಪವಿಲ್ಲ. ಅದು ಗಾಳಿ ಸುದ್ದಿ ಎಂದು ಹೇಳಿದ್ದಾರೆ. ಇನ್ನು 2,000 ರೂ.ನೋಟುಗಳ ವಿನಿಮಯಕ್ಕೆ ಆತುರಪಡುವ ಅಗತ್ಯವಿಲ್ಲ. ಬಹಳಷ್ಟು ಸಮಯ ಇದೆ ಎಂದು ಹೇಳಿದ್ದಾರೆ.
ನೋಟುಗಳ ಬದಲಾವಣೆಗೆ ಸೆಪ್ಟೆಂಬರ್ 30ರವರೆಗೆ ಅವಕಾಶ ನೀಡಲಾಗಿದೆ.ಜನರು ಒತ್ತಡವಿಲ್ಲದೆ ನೋಟುಗಳನ್ನು ಹಿಂತಿರುಗಿಸಲು ದೊಡ್ಡ ಗಡುವನ್ನು ನೀಡಲಾಗಿದೆ ಎಂದು ಆರ್ಬಿಐ ಗವರ್ನರ್ ಹೇಳಿದ್ದಾರೆ.
2,000 ರೂ.ನೋಟುಗಳನ್ನು ಹಿಂತೆಗೆದುಕೊಳ್ಳುವಿಕೆಯಿಂದ ಆರ್ಥಿಕತೆ ಮೇಲೆ ಬೀರುವ ಪರಿಣಾಮ ಅತ್ಯಂತ ಕಡಿಮೆ ಎಂದ ಅವರು, ಚಲಾವಣೆಯಲ್ಲಿರುವ ಒಟ್ಟು ನೋಟುಗಳ ಕೇವಲ ಶೇ.10.8ರಷ್ಟು 2,000 ರೂ. ನೋಟುಗಳು ಇವೆ ಎಂದು ಹೇಳಿದ್ದಾರೆ. 2016ರಲ್ಲಿ ನೋಟು ಅಮಾನ್ಯೀಕರಣದ ಬಳಿಕ ನೋಟುಗಳ ಸ್ಥಾನವನ್ನು ತುಂಬಲು 2,000 ರೂ. ಬ್ಯಾಂಕ್ ನೋಟುಗಳನ್ನು ಪರಿಚಯಿಸಲಾಗಿದೆ ಎಂದು ಆರ್ಬಿಐ ಮುಖ್ಯಸ್ಥರು ಹೇಳಿದ್ದಾರೆ.
2016, ನವೆಂಬರ್ 8ರಂದು 500 ಮತ್ತು 1000 ರೂ. ನೋಟುಗಳನ್ನು ಅಮಾನ್ಯೀಕರಣ ಮಾಡಲಾಯಿತು. ಈ ವೇಳೆ ಜನರು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದರು.
ಇದೀಗ ಚಲಾವಣೆಯಿಂದ 2 ಸಾವಿರ ರೂ ನೋಟುಗಳನ್ನು ಹಿಂಪಡೆದಿರುವ ಕೇಂದ್ರ ಸರ್ಕಾರದ ಕ್ರಮ ಮೂರ್ಖತನದ ನಡೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಪಿ. ಚಿದಂಬರಂ ಹೇಳಿದ್ದಾರೆ. ಇದು ಕಪ್ಪುಹಣವನ್ನು ಸುಲಭವಾಗಿ ಸಂಗ್ರಹಿಸಲು ಜನರಿಗೆ ಸಹಾಯ ಮಾಡಲಿದೆ. ಈಗ ಜನರಿಗೆ ತಮ್ಮ ಕರೆನ್ಸಿ ವಿನಿಮಯ ಮಾಡಿಕೊಳ್ಳಲು ರೆಡ್ ಕಾರ್ಪೆಟ್ ನೀಡಿದಂತಾಗಿದೆ ಎಂದು ಮಾಜಿ ಹಣಕಾಸು ಸಚಿವರು ಹೇಳಿದ್ದಾರೆ.