ಡೈಲಿ ವಾರ್ತೆ: 23 ಮೇ 2023

ನೂತನ ಸ್ಪೀಕರ್ ಆಗಿ ಆಯ್ಕೆಯಾದ ಯು ಟಿ ಖಾದರ್

ಬೆಂಗಳೂರು: ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಯು.ಟಿ ಖಾದರ್ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ನಿನ್ನೆ (ಸೋಮವಾರ) ರಾತ್ರಿ ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಅವರು ಕರೆ ಮಾಡಿ, ಸ್ಪೀಕರ್ ಆಗುವಂತೆ ಮನವಿ ಮಾಡಿದ್ದರು.

ಇನ್ನು ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಅಲ್ಪಸಂಖ್ಯಾತ ನಾಯಕನಿಗೆ ಸ್ಪೀಕರ್ ಸ್ಥಾನ ನೀಡಲು ಕೈ ನಾಯಕರು ತೀರ್ಮಾನ ಕೈಗೊಂಡಿದ್ದಾರೆ.

ನಿನ್ನೆಯಷ್ಟೇ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ ದೇಶಪಾಂಡೆ ಅವರು ಹಂಗಾಮಿ ಸ್ಪೀಕರ್ ಆಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು. ಹಂಗಾಮಿಯಾಗಿ ಅಧಿಕಾರ ಸ್ವೀಕರಿಸೋ ಮುನ್ನ ಈ ಹುದ್ದೆ ಬಹಳ ದೊಡ್ಡದು ನನಗೆ ಬೇಡ. ನನಗೆ ಸಚಿವ ಸ್ಥಾನ ನೀಡಬೇಕೆಂದು ಆರ್.ವಿ ದೇಶಪಾಂಡೆ ಅವರು ಒತ್ತಾಯ ಮಾಡಿದ್ದರು ಎನ್ನಲಾಗಿದೆ. ದೇಶಪಾಂಡೆ ಅವರು ಸ್ಪೀಕರ್ ಹುದ್ದೆಗೆ ಒಪ್ಪದ ಹಿನ್ನೆಲೆಯಲ್ಲಿ ಕೈ ನಾಯಕರು UT ಖಾದರ್ ಅವರ ಮನವೊಲಿಸೋ ಪ್ರಯತ್ನ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ನಿನ್ನೆ ಮಧ್ಯರಾತ್ರಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ನಡೆಸಿದರು. ಈ ಸಭೆಯಲ್ಲಿ ಸ್ಪೀಕರ್ ಸ್ಥಾನಕ್ಕೆ ಯು.ಟಿ ಖಾದರ್ ಅವರನ್ನೇ ಆಯ್ಕೆ ಮಾಡಲಾಗಿದೆ.