ಡೈಲಿ ವಾರ್ತೆ:23 ಮೇ 2023
ಆಟವಾಡುವಾಗ ಹೈಟೆನ್ಶನ್ ವೈರ್ ತಾಗಿ ಬಾಲಕಿ ಮೃತ್ಯು
ಬೆಳಗಾವಿ: ಇಲ್ಲಿನ ಮಚ್ಛೆ ಗ್ರಾಮದ ಬಳಿಯ ಆಟವಾಡುವಾಗ ಹೈಟೆನ್ಶನ್ ವೈರ್ ಸ್ಪರ್ಶಿಸಿ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ನಡೆದಿದೆ.
ಗ್ರಾಮದ ಮಧುರಾ ಮೋರೆ (13) ಮೃತ ದುರ್ದೈವಿ.
ಮಧುರಾ ಆಟವಾಡುತ್ತಾ ನಿಂತಿದ್ದಾಗ ಮನೆ ಮುಂದಿನ ಹೈಟೆನ್ಷನ್ ವೈಯರ್ ತಾಗಿದ್ದು ಶಾಕ್ ಹೊಡೆದಿದೆ. ಮನೆಯ ಮುಂಭಾಗವೇ ವಿದ್ಯುತ್ ತಂತಿ ಹಾದುಹೋಗಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ಮನೆ ಕಟ್ಟದಂತೆ ನೋಟಿಸ್:
ಹೈಟೆನ್ಶನ್ ವೈರ್ ಹಾದುಹೋಗಿದ್ದರಿಂದ, ಮನೆ ಕಟ್ಟದಂತೆ ಹೆಸ್ಕಾಂ ಅಧಿಕಾರಿಗಳು ಈ ಹಿಂದೆಯೇ ನೋಟಿಸ್ ಜಾರಿ ಮಾಡಿದ್ದರು. ಆದರೂ ನಿರ್ಲಕ್ಷ್ಯ ವಹಿಸಿ ಬಾಲಕಿ ಕುಟುಂಬಸ್ಥರು ಮನೆಯನ್ನು ನಿರ್ಮಿಸಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.