ಡೈಲಿ ವಾರ್ತೆ:29 ಮೇ 2023
ಮಣಿಪುರ ಮತ್ತೆ ಧಗ ಧಗ: ಅಮಿತ್ ಶಾ ಭೇಟಿಗೆ ಮುನ್ನ ಮತ್ತೊಂದು ಅಟ್ಯಾಕ್,ಪೊಲೀಸ್ ಸೇರಿ ಐವರ ಸಾವು.!
ಇಂಫಾಲ್: ಕಳೆದ ಕೆಲವು ದಿನಗಳಿಂದ ಸಹಜ ಸ್ಥಿತಿಗೆ ಮರಳುತ್ತಿದ್ದ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ.
ಭಾನುವಾರ ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸ್ ಸೇರಿದಂತೆ ಐವರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಇದರಿಂದಾಗಿ ಕಳೆದ ಒಂದು ತಿಂಗಳಲ್ಲಿ ಸಾವಿನ ಸಂಖ್ಯೆ 80ಕ್ಕೆ ಏರಿಕೆಯಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಕೆಲವೇ ಗಂಟೆಗಳಿಗೆ ಮುನ್ನ ಹಿಂಸಾಚಾರ ನಡೆಸಿದೆ.
ನಿನ್ನೆಯಷ್ಟೇ ಸಿಎಂ ಎನ್. ಬಿರೇನ್ ಸಿಂಗ್ ನಾಗರಿಕರ ವಿರುದ್ಧ ಶಸ್ತ್ರಾಸ್ತ್ರ ಬಳಸಿದ 40 ಭಯೋತ್ಪಾದಕರನ್ನ ಹತ್ಯೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದರು. ಭಯೋತ್ಪಾದಕರು ನಾಗರಿಕರ ವಿರುದ್ಧ M-16 ಮತ್ತು AK-47 ರೈಫಲ್ ಹಾಗೂ ಸ್ನೈಪರ್ ಗನ್‌ಗಳನ್ನ ಬಳಸಿ ದಾಳಿ ನಡೆಸಿದ್ದರು. ಅಲ್ಲದೇ ಮನೆಗಳಿಗೆ ಬೆಂಕಿ ಹಚ್ಚಲು ವಿವಿಧ ಗ್ರಾಮಗಳಿಗೆ ದಾಂಗುಡಿ ಇಟ್ಟಿದ್ದರು. ಅದಕ್ಕಾಗಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಬೇಕಾಯಿತು ಎಂಬುದಾಗಿ ಹೇಳಿದ್ದರು.
ಮೇ 31ರ ವರೆಗೆ ಇಂಟರ್ನೆಟ್ ಬಂದ್:
ಮಣಿಪುರದಲ್ಲಿ ಸದ್ಯ ಇನ್ನೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿರುವುದರಿಂದ ಮೇ 31ರ ವರೆಗೂ ರಾಜ್ಯಾದ್ಯಂತ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಇದೇ ತಿಂಗಳ ಮೇ 3ರಂದು ಪರಿಶಿಷ್ಟ ಪಂಗಡದ ಸ್ಥಾನಮಾನದ ಕುರಿತು ನ್ಯಾಯಾಲಯದ ಆದೇಶದ ವಿರುದ್ಧ ಬುಡಕಟ್ಟು ಗುಂಪುಗಳು ನಡೆಸುತ್ತಿದ್ದ ಪ್ರತಿಭಟನೆ ವೇಳೆ ವ್ಯಾಪಕ ಹಿಂಸಾಚಾರ ಭುಗಿಲೆದ್ದಿತ್ತು. ಎಸ್ಟಿ ಸ್ಥಾನಮಾನ ನೀಡಬೇಕೆಂಬ ಮೀಟೈ ಸಮುದಾಯದ ಬೇಡಿಕೆಯನ್ನ ವಿರೋಧಿಸಲಾಗಿತ್ತು. ಆ ನಂತರ ಹಿಂಸಾಚಾರ ಭುಗಿಲೆದ್ದಿತ್ತು.
ಭಾನುವಾರ (ಮೇ 28) ಹಿಂಸಾಚಾರ ಪೀಡಿತ ಸ್ಥಳಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಭೇಟಿ ನೀಡಿ ಪರಿಶೀಲಿಸಿದರು. ಇದಕ್ಕೆ ಮೂರು ದಿನ ಮುಂಚಿತವಾಗಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಸಹ ಮಣಿಪುರ ರಾಜಧಾನಿಗೆ ಭೇಟಿ ನೀಡಿದ್ದರು. ಘರ್ಷಣೆ ನಡೆದು ಒಂದು ತಿಂಗಳಾದರೂ ಮಣಿಪುರದಲ್ಲಿ ಇನ್ನೂ ಅಶಾಂತಿ ವಾತಾವರಣ ಮುಂದುವರಿದಿದೆ.
ಮಣಿಪುರದಲ್ಲಿ ಹಿಂಸಾಚಾರ ನಡೆದಿದ್ದೇಕೆ?
ಮೀಟೈ ಸಮುದಾಯ ಎಸ್ಟಿ ಸ್ಥಾನಮಾನದ ಬೇಡಿಕೆಯ ಕುರಿತು 4 ವಾರಗಳಲ್ಲಿ ಕೇಂದ್ರಕ್ಕೆ ಶಿಫಾರಸನ್ನು ಕಳುಹಿಸುವಂತೆ ಮಣಿಪುರ ಹೈಕೋರ್ಟ್ ಕಳೆದ ತಿಂಗಳು ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ನಂತರ ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಬುಡಕಟ್ಟು ಜನಾಂಗದವರು ಮೆರವಣಿಗೆಯನ್ನು ಆಯೋಜಿಸಿದ್ದರು. ಆಲ್ ಟ್ರೈಬಲ್ ಸ್ಟೂಡೆಂಟ್ ಯೂನಿಯನ್ ಮಣಿಪುರ ಚುರಾಚಂದ್‌ಪುರ ಜಿಲ್ಲೆಯ ಟೋರ್ಬಂಗ್ ಪ್ರದೇಶದಲ್ಲಿ ಬುಡಕಟ್ಟು ಐಕ್ಯತಾ ಮೆರವಣಿಗೆಗೆ ಕರೆ ನೀಡಿತ್ತು. ಈ ರ‍್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಆದರೆ ಈ ಸಂದರ್ಭದಲ್ಲಿ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗದವರ ನಡುವೆ ಹಿಂಸಾಚಾರ ನಡೆದಿತ್ತು.
ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ರಾಜ್ಯದ ಇತರ ಭಾಗಗಳಿಂದಲೂ ಹೆಚ್ಚುವರಿ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದವು. ಪರಿಸ್ಥಿತಿ ಕೈಮೀರಿದ್ದರಿಂದಾಗಿ ಕಂಡಲ್ಲಿ ಗುಂಡು ಹಾರಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೇ ಸೇನಾಪಡೆಗಳು ಹಾಗೂ ಕೇಂದ್ರೀಯ ಭದ್ರತಾಪಡೆಗಳ ಕ್ಷಿಪ್ರ ಕಾರ್ಯಾಚರಣೆಯಿಂದ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತ್ತು. ಆದ್ರೆ ಮತ್ತೆ ಅಶಾಂತಿ ವಾತಾವರಣ ಮುಂದುವರಿದ್ದು, ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿರುವುದನ್ನ ಮುಂದುವರಿಸಲಾಗಿದೆ.