ಡೈಲಿ ವಾರ್ತೆ: 09 ಜೂನ್ 2023

ಪಂಚಾಯತ್ ಕಟ್ಟಡ ಕಾಮಗಾರಿಗಾಗಿ ಇರಿಸಲಾಗಿದ್ದ ಕಬ್ಬಿಣದ ರಾಡ್ ಕಳವು ಪ್ರಕರಣ:
ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳ ಬಂಧನ

ಬಂಟ್ವಾಳ : ಗ್ರಾಮ ಪಂಚಾಯತ್ ಕಟ್ಟಡ ಕಾಮಗಾರಿಗಾಗಿ ದಾಸ್ತಾನು ಇರಿಸಲಾಗಿದ್ದ ಕಬ್ಬಿಣದ ರಾಡ್ ಮೂರು ತಿಂಗಳ ಹಿಂದೆ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಎಸ್.ಐ.ರಾಮಕೃಷ್ಣ ನೇತೃತ್ವದ ತಂಡ ಬಂಧಿಸಿದೆ.

ಸರಪಾಡಿ ಪೆರ್ಲ ದರ್ಖಾಸು ನಿವಾಸಿ ವಾಹನ ಚಾಲಕ ವಿನೋದ್ ಕುಮಾರ್, ಬೆಳ್ತಂಗಡಿ ತಾಲೂಕಿನ ಪುತ್ರಿಲ ನಿವಾಸಿ ಪುನೀತ್ ಹಾಗೂ ಬಂಟ್ವಾಳ ಅಲ್ಲಿಪಾದೆ ನಿವಾಸಿ ಪುರುಷೋತ್ತಮ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ 70 ಸಾವಿರ ಮೌಲ್ಯದ 600 ಕೆ.ಜಿ.ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ನಲ್ಲಿ ನಡೆಯತ್ತಿದ್ಧ ಕಟ್ಟಡ ಕಾಮಗಾರಿಗಾಗಿ ದಾಸ್ತಾನು ಮಾಡಲಾಗಿದ್ದ ಕಬ್ಬಿಣದ ರಾಡ್ ಮಾರ್ಚ್ 18 ರಂದು ಕಳವಾಗಿತ್ತು.
ಈ ಬಗ್ಗೆ ಇಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದರು.

ಅ ಬಳಿಕ ಪೋಲಿಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ಶುಕ್ರವಾರ ಬೆಳಿಗ್ಗೆ ಪೊಲೀಸರು ಮೊಡಂಕಾಪು ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಸಂಶಯಾಸ್ಪದ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಸಮರ್ಪಕವಾಗಿ ಉತ್ತರ ನೀಡದ ಚಾಲಕ ಸಹಿತ ವಾಹನದಲ್ಲಿದ್ದ ಮೂವರನ್ನು ವಿಚಾರಣೆ ನಡೆಸಿದಾಗ ಅಮ್ಟಾಡಿಯಲ್ಲಿ ಕಳ್ಳತನ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಈ ಕಾರ್ಯಾಚರಣೆಯಲ್ಲಿ ಬಂಟ್ವಾಳ ನಗರ ಠಾಣಾಧಿಕಾರಿ ರಾಮಕೃಷ್ಣ ಅಪರಾಧ ವಿಭಾಗದ ಸಿಬ್ಬಂದಿಗಳು ಮತ್ತು ತಾಂತ್ರಿಕ ಸಹಾಯ ದಿವಾಕರ್ ಮತ್ತು ಸಂಪತ್ತು ಜಿಲ್ಲಾ ಪೊಲೀಸ್ ಕಚೇರಿ ನಿರೀಕ್ಷಕರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.