ಡೈಲಿ ವಾರ್ತೆ: ಫೆ./07/2026

ಇ–ಸ್ವತ್ತು, ವಸತಿ ಯೋಜನೆ, ಪಡಿತರ ಚೀಟಿ ಅಕ್ರಮಗಳಿಗೆ ಕಡಿವಾಣ: ಕೋಟತಟ್ಟು ಜಮಾಬಂಧಿ ಸಭೆಯಲ್ಲಿ ಜಿ.ಪಂ ಸಿಇಒ ಕಟ್ಟುನಿಟ್ಟಿನ ಸೂಚನೆ

ಕೋಟ, ಫೆ.7: ಕೋಟತಟ್ಟು ಗ್ರಾಮ ಪಂಚಾಯತ್‌ನ 2024–25ನೇ ಸಾಲಿನ ಜಮಾಬಂಧಿ ಸಭೆಯು ಶನಿವಾರ ಬೆಳಿಗ್ಗೆ ಕೋಟ ಕಾರಂತ ಥೀಮ್ ಪಾರ್ಕ್ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷ ಸತೀಶ್ ಬಿ. ಕುಂದರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಜಮಾಬಂಧಿ ಸಭೆಗೆ ನೋಡೆಲ್ ಅಧಿಕಾರಿಯಾಗಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಭಾಗವಹಿಸಿ ಪಂಚಾಯತ್ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಮಹತ್ವದ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಇ–ಸ್ವತ್ತು ಸಮಸ್ಯೆ, ಬಾಕಿ ಉಳಿದಿರುವ ವಸತಿ ಯೋಜನೆಗಳ ಹಣ ಬಿಡುಗಡೆ ಹಾಗೂ ಪಡಿತರ ಚೀಟಿ ರದ್ದು ವಿಚಾರವಾಗಿ ತಮ್ಮ ಅಹವಾಲುಗಳನ್ನು ಮುಂದಿಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರತೀಕ್ ಬಾಯಲ್, ಹೊಸ ತಂತ್ರಾಂಶದ ಮೂಲಕ ಇ–ಸ್ವತ್ತು ಸಮಸ್ಯೆಗಳನ್ನು ಸರಿಪಡಿಸಲಾಗುತ್ತಿದ್ದು, ಮುಂದಿನ ಕೆಲ ತಿಂಗಳಲ್ಲಿ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲಿದೆ ಎಂದು ತಿಳಿಸಿದರು. ಬಸವ ವಸತಿ ಸೇರಿದಂತೆ ಬಾಕಿ ಉಳಿದಿರುವ ವಸತಿ ಯೋಜನೆಗಳ ಹಣ ಬಿಡುಗಡೆ ಕುರಿತು ಸಮಗ್ರ ವರದಿ ಪಡೆದು ಸರ್ಕಾರಕ್ಕೆ ಸಲ್ಲಿಸುವುದಾಗಿ ಭರವಸೆ ನೀಡಿದರು.

ಕೋಟತಟ್ಟು ಗ್ರಾಮ ಪಂಚಾಯತ್ ಉತ್ತಮ ಕಾರ್ಯನಿರ್ವಹಣೆಯ ಪಂಚಾಯತ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪುರಸ್ಕಾರಗಳಿಗೆ ಅರ್ಹವಾಗಿರುವುದಾಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪಡಿತರ ಚೀಟಿಗಳ ಅರ್ಹತೆ–ಅನರ್ಹತೆ ಪರಿಶೀಲನೆಗೆ ಗ್ರಾಮಸಭೆ ಮತ್ತು ವಾರ್ಡ್ ಸಭೆಗಳ ಮೂಲಕ ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು ಎಂದು ಸೂಚಿಸಿದರು.
ಪಡಿತರ ಅಕ್ಕಿಯ ಅಕ್ರಮ ಮಾರಾಟ ತಡೆಗೆ ವಾರ್ಡ್ ಮಟ್ಟದಲ್ಲಿ ಸದಸ್ಯರು ಹಾಗೂ ಸಿಬ್ಬಂದಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕೆಂದರು.
ಬಿಪಿಎಲ್ ಪಡಿತರ ಚೀಟಿದಾರರ ಪೈಕಿ ಸರ್ಕಾರಿ ನೌಕರರು, ಹೆಚ್ಚಿನ ಆದಾಯ ಹೊಂದಿರುವವರು ಹಾಗೂ ನಾಲ್ಕು ಚಕ್ರದ ವಾಹನ ಹೊಂದಿರುವವರನ್ನು ಗುರುತಿಸಿ ಆಹಾರ ಇಲಾಖೆಗೆ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದರು. ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳ ನಡವಳಿಕೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವ ಅಗತ್ಯವಿದೆ ಎಂದರು.

ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಮಾತನಾಡಿ, ಜಿ.ಪಂ ಸಿಇಒ ನೀಡಿರುವ ಮಾರ್ಗದರ್ಶನದಿಂದ ಪಂಚಾಯತ್ ಆಡಳಿತ ವ್ಯವಸ್ಥೆ ಮತ್ತಷ್ಟು ಬಲಪಡಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಸ್ವಾಗತಿಸಿ, ಜಮಾಬಂಧಿ ಅಧಿಕಾರಿ ಸುಬ್ರಮಣ್ಯ ವಾರ್ಷಿಕ ವರದಿ ಮಂಡಿಸಿದರು.

ಉಪಾಧ್ಯಕ್ಷೆ ಸರಸ್ವತಿ ಸೇರಿದಂತೆ ಸದಸ್ಯರು, ಅಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಹಾಗೂ ಪಂಚಾಯತ್ ಸಿಬ್ಬಂದಿ ವರ್ಗದವರು ಸಭೆಯಲ್ಲಿ ಭಾಗವಹಿಸಿದ್ದರು.