ಡೈಲಿ ವಾರ್ತೆ: ಫೆ./07/2026

ಮಣಿಪಾಲದಲ್ಲಿ ಶಬ್ದ ಬಾಂಬ್ ಬೈಕ್‌ಗಳ ಮೇಲೆ ಪೊಲೀಸ್ ಕತ್ತರಿ: 120 ಅಕ್ರಮ ಸೈಲೆನ್ಸರ್ ಧ್ವಂಸ

ಮಣಿಪಾಲ, ಫೆಬ್ರವರಿ 07: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದ ಜೋರಾಗಿ ಶಬ್ದ ಮಾಡುವ ಬೈಕ್‌ಗಳ ವಿರುದ್ಧ ಪೊಲೀಸರು ಕಳೆದ ಆರು ತಿಂಗಳಿನಿಂದ ನಡೆಸಿದ ವಿಶೇಷ ತಪಾಸಣೆಯಲ್ಲಿ ಮಹತ್ವದ ಯಶಸ್ಸು ದಾಖಲಿಸಿದ್ದಾರೆ.

ಮಣಿಪಾಲ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಠಾಣಾ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ನಡೆಸಿದ ವಿಶೇಷ ತಪಾಸಣೆಯಲ್ಲಿ, ಬೈಕ್‌ಗಳಲ್ಲಿ ಅಳವಡಿಸಲಾಗಿದ್ದ ಒಟ್ಟು 120 ಡಿಫೆಕ್ಟಿವ್ (ಅಕ್ರಮ) ಸೈಲೆನ್ಸರ್‌ಗಳನ್ನು ಪತ್ತೆ ಹಚ್ಚಲಾಗಿದ್ದು, ಈ ಸಂಬಂಧ 120 ಪ್ರಕರಣಗಳನ್ನು ದಾಖಲಿಸಲಾಗಿದೆ.

ಈ ಎಲ್ಲಾ ಪ್ರಕರಣಗಳಿಂದ ಒಟ್ಟು ರೂ.1,05,000/- ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ವಶಪಡಿಸಿಕೊಳ್ಳಲಾದ ಡಿಫೆಕ್ಟಿವ್ ಸೈಲೆನ್ಸರ್‌ಗಳನ್ನು ಸಾರ್ವಜನಿಕರ ಎದುರಲ್ಲೇ ನಾಶಪಡಿಸುವ ಉದ್ದೇಶದಿಂದ, ದಿನಾಂಕ 07.02.2026 ರಂದು ಮಣಿಪಾಲ ಪೊಲೀಸ್ ಠಾಣೆ ಮುಂದೆ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ್ ಶಂಕರ್, IPS ಅವರ ಸಮಕ್ಷಮದಲ್ಲಿ ಬುಲ್ಡೋಜರ್ ಬಳಸಿ ಸಂಪೂರ್ಣವಾಗಿ ನಾಶಪಡಿಸಲಾಯಿತು.

ಈ ಸಂದರ್ಭದಲ್ಲಿ ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಸೇರಿದಂತೆ ಠಾಣೆಯ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದು, ಅನಧಿಕೃತ ಸೈಲೆನ್ಸರ್‌ಗಳಿಂದ ಉಂಟಾಗುವ ಶಬ್ದ ಮಾಲಿನ್ಯ ಹಾಗೂ ಸಾರ್ವಜನಿಕ ಆರೋಗ್ಯದ ಮೇಲಿನ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಸಂದೇಶವನ್ನು ನೀಡಿದರು.

ಪೊಲೀಸರು ಮುಂದಿನ ದಿನಗಳಲ್ಲಿಯೂ ಇಂತಹ ಅಕ್ರಮ ಸೈಲೆನ್ಸರ್‌ಗಳ ವಿರುದ್ಧ ಕಠಿಣ ಕ್ರಮ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.