ಡೈಲಿ ವಾರ್ತೆ: ಫೆ./07/2026

ಉಳ್ಳಾಲದಲ್ಲಿ ಎಸ್‌ಡಿಪಿಐ ಬೂತ್ ಲೆವೆಲ್ ಏಜೆಂಟ್‌ಗಳ ಸ್ನೇಹ ಸಮ್ಮಿಲನ: ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಮಾರ್ಗದರ್ಶನ

ಉಳ್ಳಾಲ, ಫೆಬ್ರವರಿ 07: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮಂಗಳೂರು ಉಳ್ಳಾಲ ನಗರ ಸಭೆಯ ವತಿಯಿಂದ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಬೂತ್ ಲೆವೆಲ್ ಏಜೆಂಟ್‌ಗಳ (ಬಿಎಲ್ಎ) ಸ್ನೇಹ ಸಮ್ಮಿಲನ ಕಾರ್ಯಕ್ರಮವು ಉಳ್ಳಾಲ ಪಕ್ಷದ ಕಚೇರಿಯಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವು ಎಸ್‌ಡಿಪಿಐ ಉಳ್ಳಾಲ ನಗರ ಸಭಾ ಅಧ್ಯಕ್ಷರಾದ ತನ್ವೀರ್ ಅವರ ನೇತೃತ್ವದಲ್ಲಿ ನಡೆದಿದ್ದು, ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್‌ಡಿಪಿಐ ಮಂಗಳೂರು ಉಳ್ಳಾಲ ವಿಧಾನ ಸಭಾ ಕ್ಷೇತ್ರಾಧ್ಯಕ್ಷರಾದ ಝಾಹಿದ್ ಮಲಾರ್ ಅವರು ಮತದಾರ ಪಟ್ಟಿಯ ಶುದ್ಧೀಕರಣ ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಬಿಎಲ್ಎಗಳ ಪಾತ್ರದ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಎಸ್‌ಡಿಪಿಐ ನಗರ ಜಿಲ್ಲಾ ಉಪಾಧ್ಯಕ್ಷರಾದ ಅಶ್ರಫ್ ಅಡ್ಡೂರು ಅವರು ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಸವಿಸ್ತಾರವಾಗಿ ಮಾತನಾಡಿದರು. ಮನೆಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡುವ ವಿಧಾನ, ಅರ್ಹ ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಅಳಿಕೆ ಪ್ರಕ್ರಿಯೆಗಳ ಬಗ್ಗೆ ಅವರು ಬಿಎಲ್ಎಗಳಿಗೆ ಸ್ಪಷ್ಟ ಹಾಗೂ ಉಪಯುಕ್ತ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಎಸ್‌ಡಿಪಿಐ ಮಂಗಳೂರು ಉಳ್ಳಾಲ ವಿಧಾನ ಸಭಾ ಕ್ಷೇತ್ರ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ ಹಾಗೂ ಸಮಿತಿ ಸದಸ್ಯರಾದ ಅಬ್ಬಾಸ್ ಎ.ಆರ್ ಉಪಸ್ಥಿತರಿದ್ದರು.

ಸ್ನೇಹ ಸಮ್ಮಿಲನ ಕಾರ್ಯಕ್ರಮದ ಮೂಲಕ ಪಕ್ಷದ ಬೂತ್ ಲೆವೆಲ್ ಏಜೆಂಟ್‌ಗಳು SIR ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯವಾದ ಮಾಹಿತಿ ಮತ್ತು ಪ್ರಾಯೋಗಿಕ ಮಾರ್ಗದರ್ಶನವನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಮಂಗಳೂರು ಉಳ್ಳಾಲ ನಗರ ಸಭಾ ಸದಸ್ಯರಾದ ಶಬೀಲ್ ಸ್ವಾಗತ ಭಾಷಣ ಮಾಡಿದ್ದು, ಉಳ್ಳಾಲ ನಗರ ಸಭಾ ಕಾರ್ಯದರ್ಶಿ ಜಮಾಲ್ ಅವರು ಧನ್ಯವಾದ ಸಲ್ಲಿಸಿದರು.