ಡೈಲಿ ವಾರ್ತೆ:18 ಜೂನ್ 2023

ರಾಜಸ್ಥಾನ, ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ:ಜನಜೀವನ ಅಸ್ತವ್ಯಸ್ತ

ಹೊಸದಿಲ್ಲಿ: ಅಸ್ಸಾಂನಲ್ಲಿ ಭಾನುವಾರ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಜೋರ್ಹತ್ ಜಿಲ್ಲೆಯ ನೇಮತಿಘಾಟ್‌ನಲ್ಲಿ ಬ್ರಹ್ಮಪುತ್ರ ನದಿಯು ರೆಡ್ ಲೈನ್ ಮೀರಿ ಹರಿಯುತ್ತಿದೆ ಎಂದು ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಬೆಳಗಿನ ವರದಿ ತಿಳಿಸಿದೆ.

ವಿವಿಧ ಸ್ಥಳಗಳಲ್ಲಿ ಬ್ರಹ್ಮಪುತ್ರ ಸೇರಿದಂತೆ ಹಲವಾರು ಇತರ ನದಿಗಳು ಸಹ ಎಚ್ಚರಿಕೆಯ ಮಟ್ಟವನ್ನು ಮೀರಿ ಹರಿಯುತ್ತಿವೆ ಎಂದು CWC ಬುಲೆಟಿನ್ ತಿಳಿಸಿದೆ.

ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹದ ಮೊದಲ ಅಲೆಯು ಜನರನ್ನು ಬಾಧಿಸುತ್ತಿದೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯ ಪ್ರಕಾರ ರಾಜ್ಯದ 10 ಜಿಲ್ಲೆಗಳಲ್ಲಿ 37,535 ಜನರು ಇಲ್ಲಿಯವರೆಗೆ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗುವಾಹಟಿಯಲ್ಲಿ ಭೂಕುಸಿತದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ, ಆದರೆ ಪ್ರವಾಹದ ನೀರು ಇದುವರೆಗೆ ಯಾವುದೇ ಜೀವವನ್ನು ಬಲಿ ಪಡೆದಿಲ್ಲ.

ರಾಜಸ್ಥಾನದಲ್ಲೂ ನೆರೆ
ಬಿಪರ್ ಜಾಯ್ ಚಂಡಮಾರುತದ ಪರಿಣಾಮ ಭಾರೀ ಮಳೆಯಿಂದಾಗಿ ರಾಜಸ್ಥಾನದ ಮೂರು ಜಿಲ್ಲೆಗಳಾದ ಜಲೋರ್, ಸಿರೋಹಿ ಮತ್ತು ಬಾರ್ಮರ್ ನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದುವರೆಗೆ ಯಾವುದೇ ಜೀವಹಾನಿ ಮತ್ತು ಜಾನುವಾರುಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ತಗ್ಗು ಪ್ರದೇಶ ಜಲಾವೃತಗೊಂಡಿದ್ದರಿಂದ ಕನಿಷ್ಠ ಆರು ಜನರನ್ನು ರಾಜ್ಯ ವಿಪತ್ತು ಪರಿಹಾರ ಪಡೆ (ಎಸ್‌ಡಿಆರ್‌ಎಫ್) ಪಾಲಿ ಜಿಲ್ಲೆಯಲ್ಲಿ ರಕ್ಷಿಸಿದೆ.